ADVERTISEMENT

1069ರಲ್ಲಿ ಪೂರ್ಣಗೊಂಡಿದ್ದು 76 ಮಾತ್ರ!

ಕುಂಟುತ್ತಿರುವ ‘ಪೌರಕಾರ್ಮಿಕ ಗೃಹ ಭಾಗ್ಯ’ ಯೋಜನೆ

ಎಂ.ಮಹೇಶ
Published 8 ಜುಲೈ 2018, 13:36 IST
Last Updated 8 ಜುಲೈ 2018, 13:36 IST

ಬೆಳಗಾವಿ: ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಲ್ಲಿ ‘ಪೌರಕಾರ್ಮಿಕ ಗೃಹ ಭಾಗ್ಯ’ ಯೋಜನೆ ಕುಂಟುತ್ತಾ ಸಾಗುತ್ತಿದೆ.

ಇದರಿಂದಾಗಿ, ಹಲವು ವರ್ಷಗಳಿಂದಲೂ ಸ್ವಚ್ಛತಾ ವೃತ್ತಿಯಲ್ಲಿ ತೊಡಗಿರುವ ಪೌರಕಾರ್ಮಿಕರು ಸ್ವಂತದ್ದೊಂದು ಸೂರು ಕಂಡುಕೊಳ್ಳಬೇಕು ಎನ್ನುವ ಕನಸು ನನಸಾಗುವುದು ವಿಳಂಬವಾಗಲಿದೆ. ಬೆಳಗಾವಿ, ಗದಗ, ಉತ್ತರಕನ್ನಡ, ಧಾರವಾಡ, ಬಾಗಲಕೋಟೆ, ಹಾವೇರಿ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯನ್ನು ಈ ವಿಭಾಗ ಹೊಂದಿದೆ. ನಗರ ಸ್ಥಳೀಯ ಸಂಸ್ಥೆಗಳ ಕಾಯಂ ಪೌರಕಾರ್ಮಿಕರಿಗೆ ವಸತಿ ಕಲ್ಪಿಸುವ ಉದ್ದೇಶದ ಯೋಜನೆ ಇದು. 2014–15ನೇ ಸಾಲಿನಲ್ಲಿ ಜಾರಿಗೊಳಿಸಲಾಗಿದೆ. ಇದಕ್ಕಾಗಿ ಸರ್ಕಾರವು ಆ ವರ್ಷದ ಬಜೆಟ್‌ನಲ್ಲಿ ಅನುದಾನವನ್ನೂ ತೆಗೆದಿರಿಸಿದೆ.

ವಸತಿರಹಿತ ಕಾಯಂ ಪೌರಕಾರ್ಮಿಕರು, ವಾಹನಗಳಿಗೆ ಕಸ ತುಂಬುವವರು, ಸಹಾಯಕರು, ಒಳಚರಂಡಿ ಕೆಲಸಗಾರರು ಹಾಗೂ ನೈರ್ಮಲ್ಯ ಮೇಲ್ವಿಚಾರಕರಿಗೆ ಮನೆ ಕಟ್ಟಿಸಿಕೊಡುವುದಕ್ಕೆ ಅವಕಾಶವಿದೆ. ಪ್ರತಿ ಮನೆಗೆ ₹ 7.50 ಲಕ್ಷ ನಿಗದಿಪಡಿಸಲಾಗಿದೆ. ಅದರಲ್ಲಿ ಶೇ 80ರಷ್ಟು ಅಂದರೆ ₹ 6 ಲಕ್ಷವನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಉಳಿದ ಶೇ 20ರಷ್ಟನ್ನು ಅಂದರೆ ₹ 1.50 ಲಕ್ಷವನ್ನು ಫಲಾನುಭವಿಗಳು ನೀಡಬೇಕು. ಇದಕ್ಕಿಂತ ಹೆಚ್ಚುವರಿ ವೆಚ್ಚವಾದಲ್ಲಿ ಫಲಾನುಭವಿಗಳು ಅಥವಾ ನಗರ ಸ್ಥಳೀಯ ಸಂಸ್ಥೆಗಳು ಭರಿಸಬೇಕಾಗುತ್ತದೆ.

ADVERTISEMENT

ಸಮರ್ಪಕವಾಗಿ ನಡೆದಿಲ್ಲ:

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರಿ ಜಾಗಗಳ ಅಭಾವವಿರುವುದರಿಂದ, ಲಭ್ಯವಿರುವ ಸ್ಥಳಗಳನ್ನು ಉಪಯೋಗಿಸಿಕೊಂಡು ಬಹುಮಹಡಿ ವಸತಿ ಕಟ್ಟಡಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಅವಕಾಶವಿದೆ. ಪೌರಕಾರ್ಮಿಕರು ಸ್ವಂತ ನಿವೇಶನ ಹೊಂದಿದ್ದಲ್ಲಿ ಅಲ್ಲಿ ಮನೆ ಕಟ್ಟಿಕೊಳ್ಳಬಹುದಾಗಿದೆ.

ವಿಭಾಗದ 7 ಜಿಲ್ಲೆಗಳಿಗೆ, ಮೊದಲನೇ ಹಂತದಲ್ಲಿ 1069 ಮನೆಗಳು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಆದರೆ, ಕೆಲವು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾತ್ರ ಬೆರಳೆಣಿಕೆಯಷ್ಟು ಮನೆಗಳ ನಿರ್ಮಾಣ ಕಾರ್ಯವಷ್ಟೇ ಪೂರ್ಣಗೊಂಡಿದೆ. ಇವುಗಳ ಸಂಖ್ಯೆ 76 ಮಾತ್ರ. ಬಹುತೇಕ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾಮಗಾರಿಗೆ ಚಾಲನೆಯೇ ದೊರೆತಿಲ್ಲ. ಯೋಜನೆಗೆ, ಪೌರಾಡಳಿತ ನಿರ್ದೇಶನಾಲಯದಿಂದ ₹ 20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಫಲಾನುಭವಿಗಳಿಂದ ಅರ್ಜಿ ಸ್ವೀಕಾರ, ಅರ್ಹರನ್ನು ಗುರುತಿಸುವುದು, ವಂತಿಕೆಯನ್ನು ಸಂಗ್ರಹಿಸುವುದು ಮೊದಲಾದ ಕಾರ್ಯದಲ್ಲೇ ಸಮಯ ಉರುಳುತ್ತಿದೆ. 2014–15, 2015–16, 2016–17 ಹಾಗೂ 2017–18ನೇ ಸಾಲು ಪೂರ್ಣಗೊಂಡಿದ್ದರೂ ಯೋಜನೆಯಡಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಕೆಲವೆಡೆ, ನಿವೇಶನಗಳ ಲಭ್ಯತೆ ಇಲ್ಲದಿರುವುದು, ಯೋಜನೆಯ ತ್ವರಿತ ಅನುಷ್ಠಾನಕ್ಕೆ ತೊಡಕಾಗಿ ಪರಿಣಮಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಶೀಘ್ರವೇ ಪ್ರಾರಂಭ:

‘ಬೆಳಗಾವಿ ನಗರದಲ್ಲಿ ಹೋದ ವರ್ಷವಷ್ಟೇ ಯೋಜನೆಗೆ ಅನುಮೋದನೆ ದೊರೆತಿದೆ. ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ 72 ಮನೆಗಳ ನಿರ್ಮಾಣಕ್ಕೆ ₹ 3.50 ಕೋಟಿ ಅನುದಾನ ಸಿಕ್ಕಿದೆ. ಪೌರಕಾರ್ಮಿಕರಿಗೆ ಜಾಗದ ಕೊರತೆ ಇರುವುದರಿಂದ, ಎಪಿಎಂಸಿ ರಸ್ತೆಯಲ್ಲಿರುವ ಪೌರಕಾರ್ಮಿಕರ ಮನೆಗಳ ಬಳಿ ಇರುವ ಎರಡು ಎಕರೆ ಖಾಲಿ ಜಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿಕೊಡಲು ಯೋಜಿಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು.

‘ಯೋಜನೆಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಲಾಗಿದೆ. ಟೆಂಡರ್‌ ಆಗಿದೆ. ಶೀಘ್ರವೇ ಕಾರ್ಯಾದೇಶ ನೀಡಲಾಗುವುದು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. 2ನೇ ಹಂತದಲ್ಲಿ ಮನೆ ನಿರ್ಮಿಸಿಕೊಡಲು ಅರ್ಜಿ ಆಹ್ವಾನಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.