ಬೆಳಗಾವಿ: ‘ಚಿತ್ರನಟ, ಕೇಂದ್ರದ ಮಾಜಿ ಸಚಿವ ದಿವಂಗತ ಅಂಬರೀಷ್ ಅವರ ಅಂತ್ಯಸಂಸ್ಕಾರಕ್ಕೆ ವೆಚ್ಚವಾದ ಹಣವೆಷ್ಟು ಮತ್ತು ಅದನ್ನು ಭರಿಸಿದವರು ಯಾರು ಎನ್ನುವ ಮಾಹಿತಿಯನ್ನು ಸರ್ಕಾರ ಒದಗಿಸಿಲ್ಲ’ ಎಂದು ಇಲ್ಲಿನ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.
‘ಮಾಹಿತಿ ಕೋರಿ ಆರ್‌ಟಿಐಯಲ್ಲಿ ಅರ್ಜಿ ಸಲ್ಲಿಸಿದ್ದೆ. ಆ ಮಾಹಿತಿಯು ಸರ್ಕಾರದ ಬಳಿ ಇಲ್ಲದಿರುವುದು ಮತ್ತು ಯಾವ ಕಚೇರಿಯಲ್ಲಿ ಸಿಗುತ್ತದೆ ಎನ್ನುವ ಮಾಹಿತಿ ಕೂಡ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಸಿಕ್ಕಿಲ್ಲ’ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ದಾಖಲೆಗಳನ್ನು ಅವರು ಬಿಡುಗಡೆ ಮಾಡಿದ್ದಾರೆ.
‘ಅಂಬರೀಷ್ ಅವರ ಚಿಕಿತ್ಸೆಗಾಗಿ ಸರ್ಕಾರದಿಂದ ಮಾಡಿದ ವೆಚ್ಚವೆಷ್ಟು, ಅಂತ್ಯಕ್ರಿಯೆಗೆ ಖರ್ಚಾಗಿದ್ದೆಷ್ಟು ಹಾಗೂ ಅವರ ಸ್ಮಾರಕ ನಿರ್ಮಿಸಲು ನಿಗದಿಪಡಿಸಿದ ಮೊತ್ತದ ವಿವರ ನೀಡುವಂತೆ ಮುಖ್ಯ ಕಾರ್ಯದರ್ಶಿ ಕಚೇರಿಗೆ ಅರ್ಜಿ ಸಲ್ಲಿಸಿದ್ದೆ. ವೈದ್ಯಕೀಯ ವೆಚ್ಚದ ಸಲುವಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆ ಮತ್ತು ಸಿಂಗಾಪೂರ ಆಸ್ಪತ್ರೆಗೆ ಸೇರಿ ₹ 1.22 ಕೋಟಿ ಭರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ, ಅಂತ್ಯಸಂಸ್ಕಾರಕ್ಕೆ ಆದ ವೆಚ್ಚದ ಮಾಹಿತಿಯನ್ನು ಮಂಡ್ಯ ಜಿಲ್ಲಾಧಿಕಾರಿಯಿಂದ ಮತ್ತು ಸ್ಮಾರಕಕ್ಕೆ ನಿಗದಿಯಾದ ಮೊತ್ತವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪಡೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಅರ್ಜಿ ವರ್ಗಾಯಿಸಲಾಗಿತ್ತು’ ಎಂದು ಮಾಹಿತಿ ನೀಡಿದ್ದಾರೆ.
‘ಅಂಬರೀಷ್ ಅಂತ್ಯಸಂಸ್ಕಾರಕ್ಕೆ ವೆಚ್ಚವಾದ ಹಣದ ಮಾಹಿತಿಯನ್ನು ಮುಖ್ಯ ಕಾರ್ಯದರ್ಶಿ ಕಚೇರಿಯಿಂದಲೇ ಪಡೆಯುವಂತೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಿಂದ ಕೊಟ್ಟಿರುವ ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ. ಹೀಗೆ ಒಬ್ಬರತ್ತ ಇನ್ನೊಬ್ಬರು ಬೆರಳು ತೋರುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸರ್ಕಾರವಾಗಲಿ ಅಥವಾ ಅಂಬರೀಷ್ ಕುಟುಂಬದವರಾಗಲಿ ಈ ಮಾಹಿತಿ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಸ್ಮಾರಕ ನಿರ್ಮಾಣಕ್ಕೆ ಅನುದಾನ ನಿಗದಿಪಡಿಸಿಲ್ಲ ಎಂದು ವಾರ್ತಾ ಇಲಾಖೆ ತಿಳಿಸಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.