ADVERTISEMENT

ಹುಬ್ಬಳ್ಳಿ | ಪೊಲೀಸ್ ಠಾಣೆ: ಉದ್ಘಾಟನೆಗೂ ಮುನ್ನ ಸ್ಥಳಾಂತರ

ವಿದ್ಯಾನಗರ ಪೊಲೀಸ್ ಠಾಣೆಗಾಗಿ 13 ಗುಂಟೆ ಜಾಗದಲ್ಲಿ ಹೊಸ ಕಟ್ಟಡ

ನಾಗರಾಜ್ ಬಿ.ಎನ್‌.
Published 30 ಜೂನ್ 2024, 6:41 IST
Last Updated 30 ಜೂನ್ 2024, 6:41 IST
<div class="paragraphs"><p>ಹುಬ್ಬಳ್ಳಿ ಪಿಸಿ ಜಾಬಿನ್‌ ಕಾಲೇಜು ಮುಂಭಾಗದ ಕೃಷಿ ಇಲಾಖೆ ಜಾಗದ ಪಕ್ಕ ನೂತನವಾಗಿ ನಿರ್ಮಿಸಿರುವ ವಿದ್ಯಾನಗರ ಪೊಲೀಸ್‌ ಠಾಣೆ</p></div>

ಹುಬ್ಬಳ್ಳಿ ಪಿಸಿ ಜಾಬಿನ್‌ ಕಾಲೇಜು ಮುಂಭಾಗದ ಕೃಷಿ ಇಲಾಖೆ ಜಾಗದ ಪಕ್ಕ ನೂತನವಾಗಿ ನಿರ್ಮಿಸಿರುವ ವಿದ್ಯಾನಗರ ಪೊಲೀಸ್‌ ಠಾಣೆ

   

–ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ನಗರದಲ್ಲಿ ₹20.74 ಕೋಟಿ ವೆಚ್ಚದಲ್ಲಿ ಗೋಕುಲ ರಸ್ತೆ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣವಾಗಿ ಏಳು–ಎಂಟು ತಿಂಗಳು ಕಳೆದಿವೆ. ಆದರೂ, ಕಟ್ಟಡಗಳು ಇನ್ನೂ ಉದ್ಘಾಟನೆ ಆಗಿಲ್ಲ.

ADVERTISEMENT

ಗೋಕುಲ ರಸ್ತೆಯ ಕೈಗಾರಿಕಾ ವಸಾಹತು 1ನೇ ಗೇಟ್‌ ಬಳಿಯ ಎಂಎಸ್‌ಎಂಇಯ ಬಾಡಿಗೆ ಕಟ್ಟಡದಲ್ಲಿದ್ದ ಗೋಕುಲ ರಸ್ತೆ ಪೊಲೀಸ್‌ ಠಾಣೆ, ತೀರಾ ಸಮಸ್ಯೆ ಎದುರಿಸುತ್ತಿದ್ದರಿಂದ ಹೊಸ ಬಸ್‌ ನಿಲ್ದಾಣ ಬಳಿ ನಿರ್ಮಾಣವಾದ ನೂತನ ಕಟ್ಟಡಕ್ಕೆ ಕೆಲ ತಿಂಗಳ ಹಿಂದಷ್ಟೇ ಸ್ಥಳಾಂತರವಾಗಿದೆ. ಇದೀಗ, ವಿದ್ಯಾನಗರ ಪೊಲೀಸ್‌ ಠಾಣೆ ಸಹ, ಕನಕದಾಸ ಶಿಕ್ಷಣ ಸಂಸ್ಥೆ ಹತ್ತಿರದ ಕೃಷಿ ಇಲಾಖೆ ನಿವೇಶನದ ಪಕ್ಕ ನಿರ್ಮಾಣವಾದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಸಿದ್ಧತೆ ನಡೆಸಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಈ ಎರಡೂ ಠಾಣೆ ಜೊತೆಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆ ನಿರ್ಮಾಣಕ್ಕೆ 2022ರ ಸೆಪ್ಟೆಂಬರ್ 4ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಿದ್ದರು. ಪೊಲೀಸ್‌ ಗೃಹ ಮಂಡಳಿ ಹೆಚ್ಚುವರಿ ಅವಧಿ ಪಡೆದು ಕಟ್ಟಡ ಕಾಮಗಾರಿ ಪೂರ್ಣಗೊಳಿಸಿದೆ. ಆದರೆ, ಚುನಾವಾಣೆ ನೀತಿ ಸಂಹಿತೆ ಸೇರಿ ವಿವಿಧ ಕಾರಣಗಳಿಗೆ ಉದ್ಘಾಟನೆ ಮುಂದೂಡಲಾಗಿದೆ.

ವಿದ್ಯಾನಗರ ಠಾಣೆ: 1989ರಲ್ಲಿ ವಿದ್ಯಾನಗರ ಮುಖ್ಯರಸ್ತೆಯ ಕಾಡಸಿದ್ದೇಶ್ವರ ಕಾಲೇಜು ಬಳಿಯ ಅಥಣಿ ಅವರ ಕಟ್ಟಡದಲ್ಲಿ ವಿದ್ಯಾನಗರ ಠಾಣೆ ಕಾರ್ಯಾರಂಭ ಮಾಡಿತ್ತು. ಈ ಕಟ್ಟಡ ಶಿಥಿಲವಾಗಿದ್ದರಿಂದ 2009ರಲ್ಲಿ ಸನಿಹವಿರುವ ಭಾರತಿ ಕಲ್ಯಾಣ ಮಂಟಪದ ಎದುರಿನ ಎ.ಡಿ. ದೊಡ್ಡಮನಿ ಅವರ ಕಟ್ಟಡಕ್ಕೆ ಸ್ಥಳಾಂತರವಾಗಿತ್ತು. ಈ ಕಟ್ಟಡ ಸಹ ಹಳೆಯದಾಗಿದ್ದರಿಂದ ಗೋಡೆಗಳು ಬಿರುಕು ಬಿಟ್ಟಿದ್ದವು. ಮಳೆಗಾಲದಲ್ಲಿ ಸೋರುತ್ತಿತ್ತು. 2019ರಲ್ಲಿ ಭಾರತಿ ಕಲ್ಯಾಣ ಮಂಟಪ ಬಳಿಯ ಉದ್ಯಾನ ಪಕ್ಕದಲ್ಲಿರುವ ಪಾಲಿಕೆ ಒಡೆತನದ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿತು. ಈಗ ವಿದ್ಯಾನಗರ ಪಿ.ಸಿ. ಜಾಬಿನ ಕಾಲೇಜ್‌ ಎದುರಿನ ಕೃಷಿ ಇಲಾಖೆ ಪಕ್ಕದ 13 ಗುಂಟೆ ಜಾಗದಲ್ಲಿ ಹೊಸ ಠಾಣೆ ನಿರ್ಮಾಣವಾಗಿದೆ. 33 ವರ್ಷಗಳ ನಂತರ ಸ್ವಂತ ಕಟ್ಟಡ ಪಡೆದಿದೆ.

ಗೋಕುಲ ರಸ್ತೆ ಠಾಣೆ: 1981ರಿಂದ ಗೋಕುಲ ರಸ್ತೆ ಪೊಲೀಸ್‌ ಠಾಣೆ ಸಣ್ಣ ಕೈಗಾರಿಕೆ ಇಲಾಖೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಠಾಣೆ ವ್ಯಾಪಿ ಪ್ರದೇಶಗಳು ವಿಸ್ತೀರ್ಣವಾದಂತೆ ಸಿಬ್ಬಂದಿ ಸಂಖ್ಯೆ ಸಹ ಹೆಚ್ಚುತ್ತಿತ್ತು. ಇಕ್ಕಟ್ಟಾದ ಜಾಗದಲ್ಲಿಯೇ ಸಿಬ್ಬಂದಿ ಕಾರ್ಯನಿರ್ವಹಿಸಬೇಕಿತ್ತು. ಸ್ಥಳದ ಕೊರತೆಯಿಂದ ಸಿಬ್ಬಂದಿ ವಾಹನ ಸೇರಿದಂತೆ ವಶಪಡಿಸಿಕೊಂಡ ವಾಹನಗಳನ್ನು ಗೋಕುಲ ರಸ್ತೆಯ ಮುಖ್ಯರಸ್ತೆಯಲ್ಲೇ ನಿಲ್ಲಿಸಬೇಕಾಗಿತ್ತು. ಇದೀಗ ಸಾರಿಗೆ ಇಲಾಖೆಗೆ ಸೇರಿದ 27 ಗುಂಟೆ ಜಾಗ ಖರೀದಿಸಿ, ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಆಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಕಟ್ಟಡಗಳನ್ನು ಹಾಗೆಯೇ ಬಿಟ್ಟರೆ ಪಾಳು ಬೀಳುತ್ತವೆ. ಅಳವಡಿಸಿದ ಉಪಕರಣಗಳು ಹಾಳಾಗುತ್ತವೆ ಎಂಬ ಕಾರಣಕ್ಕೆ ಈಗಾಗಲೇ ಗ್ರಾಮೀಣ ಮತ್ತು ಗೋಕುಲ ರಸ್ತೆ ಪೊಲೀಸ್‌ ಠಾಣೆಗಳು ಉದ್ಘಾಟನೆಗೂ ಮುನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿವೆ.

ಸ್ಥಳಾಂತರ ಇಂದು: ಜೂನ್‌ 30ರಂದು ವಿದ್ಯಾನಗರ ಠಾಣೆ ಸ್ಥಳಾಂತರವಾಗಲಿದ್ದು, ಬೆಳಿಗ್ಗೆ ನೂತನ ಠಾಣೆಯಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಾರದೊಳಗೆ ಕಡತ, ಸಲಕರಣೆ ಸ್ಥಳಾಂತರಿಸಿ ಅಲ್ಲಿಯೇ ಸಂಪೂರ್ಣ ಕಾರ್ಯನಡೆಸಲಿದೆ.

ಸ್ವಂತ ಕಟ್ಟಡಗಳಿಗೆ ಸಾಂಕೇತವಾಗಿ ಸ್ಥಳಾಂತರವಾಗುತ್ತಿದ್ದೇವೆ. ಗೃಹ ಸಚಿವರು ಸಮಯ ನೀಡಿದ ನಂತರ ಕಟ್ಟಡ ಉದ್ಘಾಟನೆ ನೆರವೇರಲಿದೆ

- ರೇಣುಕಾ ಸುಕುಮಾರ್‌, ಕಮಿಷನರ್‌, ಹು–ಧಾ ಮಹಾನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.