ADVERTISEMENT

ಹುಕ್ಕೇರಿ: ಉದ್ಘಾಟನೆಗೆ ಸಜ್ಜಾದ 'ಸುವರ್ಣ ಕರ್ನಾಟಕ ಭವನ'

ಸಭಾಂಗಣ ಹುಡುಕಲು ತಪ್ಪಲಿದೆ ಪರದಾಟ, ಶೀಘ್ರವೇ ಬಳಕೆಗೆ ಮುಕ್ತ

ಎನ್.ಪಿ.ಕೊಣ್ಣೂರ
Published 1 ಸೆಪ್ಟೆಂಬರ್ 2024, 6:32 IST
Last Updated 1 ಸೆಪ್ಟೆಂಬರ್ 2024, 6:32 IST
ಹುಕ್ಕೇರಿ ಹೊರವಲಯದಲ್ಲಿ ನಿರ್ಮಿಸಿರುವ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ದ ವಿಹಂಗಮ ನೋಟ
ಹುಕ್ಕೇರಿ ಹೊರವಲಯದಲ್ಲಿ ನಿರ್ಮಿಸಿರುವ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ದ ವಿಹಂಗಮ ನೋಟ   

ಹುಕ್ಕೇರಿ: ಇಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಸುಸಜ್ಜಿತ ಸಭಾಂಗಣ ಹುಡುಕುವುದೇ ಸಂಘಟಕರು ಹಾಗೂ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಇನ್ಮುಂದೆ ಆ ಕೊರತೆ ನೀಗಲಿದೆ. ಅನಿವಾರ್ಯವಾಗಿ ಅವರು ಖಾಸಗಿ ಸಭಾಂಗಣಗಳತ್ತ ಮುಖಮಾಡುವುದು ತಪ್ಪಲಿದೆ.

ಪಟ್ಟಣದ ಹೊರವಲಯದ ಕ್ಯಾರಗುಡ್ಡದ ಕಾಲೇಜು ಕ್ಯಾಂಪಸ್ ಬಳಿ ತಲೆ ಎತ್ತಿರುವ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ ಉದ್ಘಾಟನೆಗೆ ಸಜ್ಜಾಗಿದ್ದು, ಶೀಘ್ರವೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

ಹುಕ್ಕೇರಿಗೆ ಮಂಜೂರಾಗಿದ್ದ ಈ ಭವನದ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿತ್ತು. ಆಗ ಕ್ಷೇತ್ರದ ಶಾಸಕರಾಗಿದ್ದ ದಿ.ಉಮೇಶ ಕತ್ತಿ ಕಾಮಗಾರಿಗೆ ಇರುವ ಎಲ್ಲ ತೊಡುಕುಗಳನ್ನು ನಿವಾರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ₹4 ಕೋಟಿ ಅನುದಾನ ಬಳಸಿಕೊಂಡು ಹಂತ –ಹಂತವಾಗಿ ನಡೆದ ಭವನದ ಕಾಮಗಾರಿ ಈಗ ಪೂರ್ಣಗೊಂಡಿದೆ. ರಾಷ್ಟ್ರ, ರಾಜ್ಯ, ವಿಭಾಗೀಯ ಮತ್ತು ಸ್ಥಳೀಯಮಟ್ಟದ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಸಂಘಟಕರಿಗೆ ಸುಸಜ್ಜಿತ ಭವನ ಸಿಕ್ಕಂತಾಗಿದೆ.

ADVERTISEMENT

ಏನೇನು ಸೌಲಭ್ಯ ಇವೆ?: 

ಹುಕ್ಕೇರಿ–ಗೋಕಾಕ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಭವನ ಉತ್ತಮ ಸಾರಿಗೆ ಸೌಕರ್ಯ ಹೊಂದಿದೆ. 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನೆಲಮಹಡಿ, 3,500 ಚದರ ಅಡಿ ವಿಸ್ತೀರ್ಣದಲ್ಲಿ ಮೊದಲ ಮಹಡಿ ನಿರ್ಮಾಣವಾಗಿದ್ದು, ಎರಡು ರಿಹರ್ಸಲ್‌ ಕೋಣೆ, ವಿಸ್ತಾರವಾದ ವೇದಿಕೆ ಇದೆ. 1 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಹುಕ್ಕೇರಿ ಹೊರವಲಯದಲ್ಲಿ ನಿರ್ಮಿಸಿರುವ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ದ ವಿಹಂಗಮ ನೋಟ
ಪ್ರಾದೇಶಿಕ ಸುವರ್ಣ ಕರ್ನಾಟಕ ಭವನವನ್ನು ಶೀಘ್ರ ಉದ್ಘಾಟಿಸಲಾಗುವುದು. ಅಧಿಕಾರಿಗಳು ಶಾಲಾ–ಕಾಲೇಜಿನವರು ಸಂಘ–ಸಂಸ್ಥೆಯವರು ಇದರ ಸದುಪಯೋಗ ಪಡೆದುಕೊಳ್ಳಬೇಕು
ನಿಖಿಲ್ ಕತ್ತಿ ಶಾಸಕ
ಹುಕ್ಕೇರಿಯಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿದೆ. ಈ ಭವನ ಬಳಕೆಗೆ ಮುಕ್ತವಾದರೆ ಕಲಾವಿದರು ಸಾಹಿತಿಗಳು ಮತ್ತು ಸಂಘಟಕರಿಗೆ ಉಪಯುಕ್ತವಾಗಲಿದೆ
ರಮೇಶ ಕತ್ತಿ ಅಧ್ಯಕ್ಷ ಬಿಡಿಸಿಸಿ ಬ್ಯಾಂಕ್
ಹೊಸದಾಗಿ ತಲೆ ಎತ್ತಿರುವ ಈ ಭವನ ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆಗೆ ಸೂಕ್ತ ಸ್ಥಳ. ಹುಕ್ಕೇರಿಯಿಂದ ಅಲ್ಲಿಗೆ ನಿಯಮಿತವಾಗಿ ಬಸ್‌ ಸೌಕರ್ಯ ಕಲ್ಪಿಸಬೇಕು
ಶಿವಾನಂದ ಝಿರಲಿ ಅಧ್ಯಕ್ಷ ಗುರುಶಾಂತೇಶ್ವರ ಕಲಾ ಪೋಷಕರ ಸಂಘ ಹುಕ್ಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.