ADVERTISEMENT

ಹುಕ್ಕೇರಿ: ವಾಹನ ನಿಲುಗಡೆಗೆ ರಸ್ತೆಯೇ ಜಾಗ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:12 IST
Last Updated 15 ಜುಲೈ 2024, 15:12 IST
ಹುಕ್ಕೇರಿ ಪಟ್ಟಣದ ಡಿಸಿಸಿ ಮತ್ತು ಎಸ್.ಬಿ.ಐ ಬ್ಯಾಂಕ್ ಎದುರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಆಗಿರುವುದು
ಹುಕ್ಕೇರಿ ಪಟ್ಟಣದ ಡಿಸಿಸಿ ಮತ್ತು ಎಸ್.ಬಿ.ಐ ಬ್ಯಾಂಕ್ ಎದುರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಆಗಿರುವುದು    

ಹುಕ್ಕೇರಿ: ಪಟ್ಟಣದಲ್ಲಿ ವಾಹನ ನಿಲುಗಡೆಗೆ ರಸ್ತೆಯನ್ನೇ ಬಳಸುತ್ತಿರುವುದರಿಂದ ದಿನನಿತ್ಯದ ಟ್ರಾಫಿಕ್ ಸಮಸ್ಯೆಯೊಂದಿಗೆ ಸಂತೆಯ ದಿನ ಸೋಮವಾರ (ಪ್ರತಿ ವಾರ) ಗ್ರಾಹಕರಿಗೆ ಮತ್ತು ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ.

ಪಟ್ಟಣ ತಾಲ್ಲೂಕು ಕೇಂದ್ರವಾಗಿರುವುದರಿಂದ ಸಂತೆಯು ಸೇರಿದಂತೆ ಇತರೆ ಕಾರ್ಯಕ್ಕೆ ನೂರಾರು ಜನರು ಆಗಮಿಸುವರು. ಹುಕ್ಕೇರಿ ಸರ್ಕಲ್‌ನಿಂದ ಹಳೆ ಬಸ್ ನಿಲ್ದಾಣದವರೆಗೆ ಪಾದಚಾರಿಗಳು ಸರಳವಾಗಿ ತಿರುಗಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾರ್ಕಿಂಗ್ ಸೌಲಭ್ಯವಿಲ್ಲ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಮುಖ್ಯ ರಸ್ತೆಯಲ್ಲಿ ಸರ್ಕಾರಿ ಕಚೇರಿಗಳು, ಪುರಸಭೆ, ವಿವಿಧ ಬ್ಯಾಂಕುಗಳು, ಬಸ್ ನಿಲ್ದಾಣ, ಹೊಟೇಲ್, ವ್ಯಾಪಾರಿ ಮಳಿಗೆಗಳು, ಬಟ್ಟೆ ಅಂಗಡಿಗಳು ಇರುವುದರಿಂದ ವಿವಿಧ ಕಾರಣಕ್ಕೆ ಬಂದ ಜನರು ತಮ್ಮ ದ್ವಿಚಕ್ರ ವಾಹನ, ಕಾರು ಮತ್ತಿತರ ವಾಹನಗಳನ್ನು ರಸ್ತೆ ಬದಿ ನಿಲ್ಲಿಸುವರು. ಇದರಿಂದ ಆಚೆ ಈಚೆ ಹೋಗುವ ವಾಹನಗಳಿಗೆ ಇಂದು ರಸ್ತೆ ಸಿಗದಿರುವುದರಿಂದ ಟ್ರಾಫಿಕ್ ಜಾಮ್ ಆಗಿ ಜನರಿಗೆ ಕಿರಿಕಿರಿಯುಂಟಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ADVERTISEMENT

ಮನವಿಗೆ ಕಿಮ್ಮತ್ತಿಲ್ಲ?: ಪ್ರತಿಬಾರಿ ಪೊಲೀಸರ ಸಭೆಯಲ್ಲಿ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ವಿನಂತಿಸಿದರೂ ಈವರೆಗೆ ಇವೆರಡು ಕಾರ್ಯ ಕೈಗೂಡಿಲ್ಲ. ಸೋಮವಾರ ಸಂತೆಯ ದಿನವಾದರೂ, ಪೊಲೀಸರು ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗುವುದೊ ಅಲ್ಲಲ್ಲಿ ನಿಂತು ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಂಡರೆ ಒಳ್ಳೆದಾಗುತ್ತದೆ ಎಂಬುದು ವ್ಯಾಪಾರಿಗಳ ಅಭಿಮತ.

‘ಸಾರ್ವಜನಿಕ ಸ್ಥಳ ಮತ್ತು ರಸ್ತೆ ಬದಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಪೊಲೀಸರು ಸಂಬಂಧಿಸಿದ ಜನಪ್ರತಿನಿಧಿ ಮತ್ತು ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದು ಅವಶ್ಯ’ ಎಂದು ಹುಕ್ಕೇರಿ ವಕೀಲರ ಸಂಘದ ಅಧ್ಯಕ್ಷ ಅನೀಸ್ ವಂಟಮೂರಿ ಹೇಳಿದರು.

ಹುಕ್ಕೇರಿ ಪಟ್ಟಣದ ಡಿಸಿಸಿ ಮತ್ತು ಎಸ್.ಬಿ.ಐ ಬ್ಯಾಂಕ್ ಎದುರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಆಗಿರುವುದು

Quote - ಪಟ್ಟಣದಲ್ಲಿ ವಾಹನ ಪಾರ್ಕಿಂಗ್ ಗೆ ಸೂಕ್ತ ಜಾಗವಿಲ್ಲ. ಈ ಕುರಿತು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಜತೆ ಚರ್ಚಿಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲು ಕ್ರಮ ಜರುಗಿಸಲಾಗುವುದು ಕಿಶೋರ್ ಬೆಣ್ಣಿ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.