ಅಥಣಿ: ‘ಮಾನಹಾನಿ ಆಗುವ ವಿಷಯ ಪ್ರಸಾರ ಮಾಡದಂತೆ ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಾನು ಯಾವುದೇ ಕೋರ್ಟ್‌ಗೆ ಹೋಗುವುದಿಲ್ಲ’ ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ತಾಲ್ಲೂಕಿನ ಸಂಬರಗಿ ಗ್ರಾಮದಲ್ಲಿ ₹ 2 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಕೆಲವರು ದುರುದ್ದೇಶ ಇಟ್ಟುಕೊಂಡು ಷಡ್ಯಂತ್ರ ಮಾಡುತ್ತಿದ್ದಾರೆ. ಮುಂದೆ ನಮ್ಮ ಬಗ್ಗೆಯೂ ಸುಳ್ಳು ಆರೋಪ ಹಾಗೂ ವದಂತಿಗಳನ್ನು ಹಬ್ಬಿಸಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಸಚಿವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನನಗೇನೂ ಹೆದರಿಕೆ ಇಲ್ಲ’ ಎಂದರು.
‘ಸಿ.ಡಿ. ನಕಲಿ ಎಂದು ರಮೇಶ ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಆದಷ್ಟು ಬೇಗ ಆರೋಪದಿಂದ ಮುಕ್ತರಾಗಿ ಬರುತ್ತಾರೆ. ಅವರಿಂದ ತೆರವಾದ ಸಚಿವ ಸ್ಥಾನವನ್ನು ವರಿಷ್ಠರು ಯಾರಿಗೆ ಕೊಡುತ್ತಾರೆಯೋ ಕಾದು ನೋಡಬೇಕು. ಆದಷ್ಟು ಬೇಗ ಮುಕ್ತರಾದರೆ ಅವರೇ ಸಚಿವ ಸ್ಥಾನ ಪಡೆಯುತ್ತಾರೆ’ ಎಂದು ಹೇಳಿದರು.
ಗಡಿ ಉಸ್ತುವಾರಿ ಸಚಿವರ ನೇಮಕ ನನೆಗುದಿಗೆ ಬಿದ್ದಿರುವ ಪ್ರಶ್ನೆಗೆ, ‘ನಾವೇನು ಪಾಕಿಸ್ತಾನ ಅಥವಾ ಚೀನಾ ಗಡಿಯಲ್ಲಿದ್ದೇವೆಯೇ? ನಾವೂ ಗಡಿಯಲ್ಲೆ ಇದ್ದೇವೆ. ಪ್ರತ್ಯೇಕ ಸಚಿವರ ಅಗತ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.