ADVERTISEMENT

ಶೆಟ್ಟರ್‌ ಸೋತಿದ್ದರೆ ಸನ್ಯಾಸಿ ಆಗುತ್ತಿದ್ದೆ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 15:27 IST
Last Updated 20 ಜೂನ್ 2024, 15:27 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಗೋಕಾಕ: ‘ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್‌ ಸೋತಿದ್ದರೆ ನಾನು ಹಿಮಾಲಯಕ್ಕೆ ಹೋಗಿ ಸನ್ಯಾಸಿ ಆಗಬೇಕಿತ್ತು. ‘ಮಹಾನಾಯಕ’ ಹಾಗೂ ‘ವಿಷಕನ್ಯೆ’ ಸೋಲು ನನ್ನನ್ನು ಸನ್ಯಾಸತ್ವದಿಂದ ಪಾರು ಮಾಡಿದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಸಂಸದ ಜಗದೀಶ ಶೆಟ್ಟರ್‌ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡೆವು. ಹಾಗಾಗಿ, ನಾನು ಎಲ್ಲಿಯೂ ಏನೂ ಮಾತನಾಡಿಲ್ಲ. ಪದೇಪದೇ ಸೋಲುವುದು ಸರಿಯಲ್ಲ. ಹೀಗಾಗಿ, ಈ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡೆ. ಒಂದು ವೇಳೆ ಈ ಬಾರಿಯೂ ಸೋತರೆ ಸನ್ಯಾಸಿ ಆಗಲು ಹಿಮಾಲಯದಲ್ಲಿ ಒಂದು ಜಾಗ ಕೂಡ ನೋಡಿ ಬಂದಿದ್ದೆ’ ಎಂದು ಹೇಳಿ ನಕ್ಕರು.

‘ಬೆಳಗಾವಿ ಗ್ರಾಮೀಣ ಕ್ಷೇತ್ರದ ಮತದಾರರು ದಬ್ಬಾಳಿಕೆ ರಾಜಕೀಯ ನಡೆ ವಿರುದ್ಧ ತಮ್ಮ ಮತ ಚಲಾಯಿಸಿ, ಆ ಕ್ಷೇತ್ರದ ಕಾಂಗ್ರೆಸ್ ನಾಯಕಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗೆ ಬುದ್ಧಿ ಕಲಿಸಿದ್ದಾರೆ. ಗೋಕಾಕ ವಿಧಾನಸಭಾ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿಗೆ 24 ಸಾವಿರ ಮತಗಳ ಮುನ್ನಡೆ ಸಿಕ್ಕಿದೆ. ಈ ಫಲಿತಾಂಶ ನೆಮ್ಮದಿ ತಂದಿದೆ’ ಎಂದರು.

ADVERTISEMENT

‘ಶೆಟ್ಟರ್‌ 1.5 ಲಕ್ಷ ಮತಗಳಿಗಿಂತ ಹೆಚ್ಚು ಅಂತರದಲ್ಲಿ ಗೆಲ್ಲುತ್ತಾರೆ. ಗೆಲುವಿನ ಅಂತರ ಕಡಿಮೆಯಾದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ನಾಯಕರಿಗೆ ಹೇಳಿದ್ದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವತ್ತೂ ಸೊಕ್ಕು ತೋರಿಸಿಕೊಂಡಿಲ್ಲ. ನನಗೆ ಅಥವಾ ನಮ್ಮ ಪಕ್ಷಕ್ಕೆ ಯಾವಾಗಲೂ ಅಸಹ್ಯ ಮಾತನಾಡಿಲ್ಲ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ‘ಅವರಿಬ್ಬರು’ ದರ್ಪ ತೋರಿಸಿದರು, ಮನೆಮನೆಗೆ ಹಣ ಸುರಿದರು. ಆದರೆ, ನಾವು ಖಾಲಿ ಕೈ ಮುಗಿದು ಗೆದ್ದೆವು’ ಎಂದರು.

‘ನಾನು ಕೂಡ ಸಚಿವನಾಗಿದ್ದಾಗ ಸೊಕ್ಕು ತೋರಿಸಿದ್ದರಿಂದಲೇ ಜನ ನನಗೂ ತಿರುಗೇಟು ಕೊಟ್ಟರು. ಈಗ ‘ಅವರು’ ಸೊಕ್ಕು ತೋರುತ್ತಿದ್ದಾರೆ. ನಾನಂತೂ ಇನ್ನು ಮುಂದೆ ಯಾವತ್ತೂ ಸೊಕ್ಕು ತೋರಿಸುವುದಿಲ್ಲ. ಬುದ್ಧಿವಂತಿಕೆಯಿಂದ ಹೆಜ್ಜೆ ಇಡುತ್ತೇನೆ’ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಹೆಸರನ್ನು ಬಳಸದೇ ಪದೇಪದೇ ‘ಮಹಾನಾಯಕ’ ಹಾಗೂ ‘ವಿಷಕನ್ಯೆ’ ಎಂಬ ಪದಗಳನ್ನೇ ಅವರು ಪ್ರಯೋಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.