ADVERTISEMENT

ಕಮಿಷನ್‌ ಹೆಚ್ಚಿಸಿ ಇಲ್ಲವೆ, ಡಿ ಗ್ರೂಪ್‌ ನೌಕರರಾಗಿ ಘೋಷಿಸಿ: ಡಿ.ಸಿ.ಕಟಾರಿಯಾ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:24 IST
Last Updated 18 ಜೂನ್ 2024, 14:24 IST
   

ಬೆಳಗಾವಿ: ‘ದೇಶದಲ್ಲಿ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡುತ್ತಿರುವ ಪ್ರತಿ ಕ್ವಿಂಟಲ್‌ ಅಕ್ಕಿಗೆ ನೀಡಲಾಗುತ್ತಿರುವ ಕಮಿಷನ್‌ ಅನ್ನು ₹460ಕ್ಕೆ ಹೆಚ್ಚಿಸಬೇಕು. ಇಲ್ಲದಿದ್ದರೆ ಅಂಗಡಿಕಾರರನ್ನು ‘ಡಿ’ ದರ್ಜೆ ನೌಕರರನ್ನಾಗಿ ಘೋಷಿಸಬೇಕು’ ಎಂದು ಆಲ್‌ ಇಂಡಿಯಾ ಫೇರ್‌ ಪ್ರೈಸ್‌ ಶಾಪ್‌ ಡೀಲರ್ಸ್‌ ಫೆಡರೇಷನ್‌ ಅಧ್ಯಕ್ಷ ಡಿ.ಸಿ.ಕಟಾರಿಯಾ ಆಗ್ರಹಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದ ವಿವಿಧೆಡೆ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಿಸುವ ನ್ಯಾಯಬೆಲೆ ಅಂಗಡಿಕಾರರಿಗೆ ನೀಡುತ್ತಿರುವ ಕಮಿಷನ್‌ ಮೊತ್ತ ಕಡಿಮೆಯಿದೆ. ಪಂಜಾಬ್‌ನಲ್ಲಿ ಪ್ರತಿ ಕ್ವಿಂಟಲ್‌ ಅಕ್ಕಿ ಹಂಚಿಕೆ ಮಾಡಿದರೆ ₹450, ಕರ್ನಾಟಕದಲ್ಲಿ ₹150, ದೆಹಲಿಯಲ್ಲಿ ₹200 ಕಮಿಷನ್‌ ಕೊಡಲಾಗುತ್ತಿದೆ. ಕಮಿಷನ್‌ ಮೊತ್ತವನ್ನು ₹460ಕ್ಕೆ ಹೆಚ್ಚಿಸಿದರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

‘ಕಮಿಷನ್‌ ಮೊತ್ತ ಹೆಚ್ಚಿಸುವಂತೆ ಹಲವು ವರ್ಷಗಳಿಂದ ಹೋರಾಡುತ್ತಿದ್ದೇವೆ. ಹಾಗಾಗಿ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ಅಂಗಡಿಕಾರರನ್ನು ‘ಡಿ’ ದರ್ಜೆ ನೌಕರರಾಗಿ ಘೋಷಿಸಿ, ಸರ್ಕಾರಿ ಸೌಲಭ್ಯ ನೀಡಬೇಕು’ ಎಂದೂ ಒತ್ತಾಯಿಸಿದರು.

ADVERTISEMENT

ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ, ‘ನ್ಯಾಯಬೆಲೆ ಅಂಗಡಿಕಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಇತರರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.