ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೊ ಪ್ರಕರಣ ಹೆಚ್ಚಳ: ಭೀಮಾಶಂಕರ ಗುಳೇದ

ಸಾಮಾಜಿಕ ಜಾಲತಾಣ ದುಷ್ಪರಿಣಾಮ: ಡಾ. ಭೀಮಾಶಂಕರ ಗುಳೇದ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:29 IST
Last Updated 18 ಜೂನ್ 2024, 14:29 IST
ಚಿಕ್ಕೋಡಿ ಪಟ್ಟಣದ ಕೆಎಲ್ಇ ಸಂಸ್ಥೆಯ ಸ್ವತಂತ್ರ ಪಿಯು ವಿಜ್ಞಾನ ಕಾಲೇಜಿನಲ್ಲಿ 'ಆಗಮನ' ಕಾರ್ಯಕ್ರಮವನ್ನು ಎಸ್ಪಿ ಡಾ. ಭೀಮಾಶಂಕರ ಗುಳೇದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಾಂತೇಶ ಕವಟಗಿಮಠ, ಶೀತಲ ನಂಜಪ್ಪನವರ, ಪ್ರಾಚಾರ್ಯ ಪ್ರಸಾದ ರಾಂಪೂರೆ, ವೆಂಕಟರೆಡ್ಡಿ ಪಾಲ್ಗೊಂಡಿದ್ದರು
ಚಿಕ್ಕೋಡಿ ಪಟ್ಟಣದ ಕೆಎಲ್ಇ ಸಂಸ್ಥೆಯ ಸ್ವತಂತ್ರ ಪಿಯು ವಿಜ್ಞಾನ ಕಾಲೇಜಿನಲ್ಲಿ 'ಆಗಮನ' ಕಾರ್ಯಕ್ರಮವನ್ನು ಎಸ್ಪಿ ಡಾ. ಭೀಮಾಶಂಕರ ಗುಳೇದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಾಂತೇಶ ಕವಟಗಿಮಠ, ಶೀತಲ ನಂಜಪ್ಪನವರ, ಪ್ರಾಚಾರ್ಯ ಪ್ರಸಾದ ರಾಂಪೂರೆ, ವೆಂಕಟರೆಡ್ಡಿ ಪಾಲ್ಗೊಂಡಿದ್ದರು   

ಚಿಕ್ಕೋಡಿ: ‘ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮದಿಂದ ಬಾಲ್ಯ ವಿವಾಹ ಹಾಗೂ ಪೋಕ್ಸೊ ಪ್ರಕರಣಗಳು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಆದ್ದರಿಂದ ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್‌ಫೋನ್‌ ಕೊಡಬೇಡಿ. ಮೊಬೈಲ್ ಪೋನ್‌ನಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸಲಹೆ ನೀಡಿದರು.

ಪಟ್ಟಣದ ಕೆ ಎಲ್ ಇ ಸಂಸ್ಥೆಯ ಸ್ವತಂತ್ರ ಪಿಯು ವಿಜ್ಞಾನ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ಆಗಮನ’ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.

‘ತಂದೆ–ತಾಯಿಯೊಂದಿಗೆ ಮಕ್ಕಳು ಇದ್ದು ಶಿಕ್ಷಣ ಪಡೆಯುವುದು ಇಂದಿನ ಕಾಲದಲ್ಲಿ ಬಹಳ ಮುಖ್ಯವಾಗಿದೆ. ನಗರ ಪ್ರದೇಶದಲ್ಲಿ ಮಕ್ಕಳು ಹಾಳಾಗುವ ಅವಕಾಶಗಳು ಹೆಚ್ಚಿರುತ್ತದೆ. ಹಾಗಾಗಿ ಅವರ ಮೇಲೆ ನಿಗಾ ಇಡಬೇಕು. ಮಕ್ಕಳ ಕೈಗೆ ಬೈಕ್ ಕೂಡ ಕೊಡಬೇಡಿ. ಅಲ್ಲದೇ ಪಾಲಕರು ಕೂಡ ಮೊಬೈಲ್ ಫೋನ್‌ ಗೀಳು ಕಡಿಮೆ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು’ ಎಂದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಎಲ್ ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಮಾತನಾಡಿ, ‘21ನೇ ಶತಮಾನದಲ್ಲಿ ಜ್ಞಾನ ಎಂಬುವುದು ದೊಡ್ಡ ಆಸ್ತಿಯಾಗಿದೆ. ಈ ಹಿಂದೆ ಹೊಲ, ಮನೆ, ಆಸ್ತಿಯಿಂದ ವ್ಯಕ್ತಿಯ ವ್ಯಕ್ತಿತ್ವ ಅಳೆಯಲಾಗುತ್ತಿತ್ತು. ಇಂದು ಆತ ಪಡೆದ ಶಿಕ್ಷಣದಿಂದ ವ್ಯಕ್ತಿತ್ವವನ್ನು ಅಳೆಯಲಾಗುತ್ತಿದೆ. ಪಾಲಕರು ಮಕ್ಕಳೊಂದಿಗೆ ಕಾಲ ಕಳೆಯುವುದು ಅಷ್ಟೇ ಮುಖ್ಯವಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಲ್‍ಇ ಸಂಸ್ಥೆಯ ಪಿಯು ಸ್ವತಂತ್ರ ವಿಜ್ಞಾನ ಕಾಲೇಜಿನ ದ್ವಿತೀಯ ಪಿಯುಸಿ, ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೆಎಲ್‍ಇ ಪಿಯು ಕಾಲೇಜುಗಳ ಸದಸ್ಯ ಕಾರ್ಯದರ್ಶಿ ಶೀತಲ ನಂಜಪ್ಪನವರ, ಕೆಎಲ್‍ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಪ್ರಸಾದ ರಾಂಪೂರೆ, ಮುಖಂಡರಾದ ಎನ್.ಎಸ್. ವಂಟಮುತ್ತೆ, ಎಸ್.ಎಸ್.ಕವಲಾಪೂರೆ, , ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ಪಿಎಸ್‍ಐ ಬಸಗೌಡ ನೇರ್ಲಿ ಮುಂತಾದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಪಿ.ವೆಂಕಟರೆಡ್ಡಿ ಸ್ವಾಗತಿಸಿದರು. ಗಂಗಾ ಅರಬಾಂವಿ ನಿರೂಪಿಸಿದರು. ಕರಣಬಾಬು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.