ADVERTISEMENT

Independence Day: ಒಂದೇ ಕುಟುಂಬದಲ್ಲಿ 16 ಮಂದಿ ಸ್ವಾತಂತ್ರ್ಯ ಹೋರಾಟಗಾರರು

ಈ ಪೈಕಿ ಸೆರೆವಾಸ ಅನುಭವಿಸಿದ 13 ಮಂದಿ

ಇಮಾಮ್‌ಹುಸೇನ್‌ ಗೂಡುನವರ
Published 15 ಆಗಸ್ಟ್ 2024, 6:54 IST
Last Updated 15 ಆಗಸ್ಟ್ 2024, 6:54 IST
ವಿಠ್ಠಲರಾವ್‌ ಯಾಳಗಿ
ವಿಠ್ಠಲರಾವ್‌ ಯಾಳಗಿ   

ಬೆಳಗಾವಿ: ‘ಆಂಗ್ಲರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಪೊಲೀಸರು ನನ್ನನ್ನು ಬಂಧಿಸಿ, ಕ್ಯಾಂಪ್‌ ಠಾಣೆಯೊಳಗೆ ಇರಿಸಿದರು. ಮಧ್ಯರಾತ್ರಿ 12ರಿಂದ ನಸುಕಿನ 5ರವರೆಗೆ ಐಸ್‌ ಗಡ್ಡೆ ಮೇಲೆ ಕೂರಿಸುತ್ತಿದ್ದರು. ಬೂಟುಗಾಲಿನಿಂದ ಬೆನ್ನಿನ ಮೇಲೆ ಒದೆಯುತ್ತಿದ್ದರು. ನಾವು ಹೇಳಿದ ಕೆಲಸ ಮಾಡಿಲ್ಲವೆಂದು ಚಿತ್ರಹಿಂಸೆ ಕೊಟ್ಟಿದ್ದರು. ಎಲ್ಲವನ್ನೂ ಸಹಿಸಿಕೊಂಡೆವು.

ಪ್ರಾಣ ಬಿಟ್ಟರೂ ಪರವಾಗಿಲ್ಲ. ಆಂಗ್ಲರಿಂದ ಮುಕ್ತಿ ಪಡೆಯಬೇಕು ಎಂಬುದೇ ನಮ್ಮ ಉದ್ದೇಶವಾಗಿತ್ತು’

ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲರಾವ್‌ ಕೃಷ್ಣರಾವ್‌ ಯಾಳಗಿ (98) ಹೀಗೆ ಹೇಳುವಾಗ ಭಾವುಕರಾದರು.

ADVERTISEMENT

‘ಪೊಲೀಸರ ವಶದಲ್ಲಿದ್ದಾಗ 15 ದಿನಗಟ್ಟಲೇ ಸ್ನಾನ ಮಾಡಿರಲಿಲ್ಲ. ಚಹಾ, ಪಾವ್‌ ಬಿಟ್ಟರೆ, ಊಟಕ್ಕೆ ಏನೂ ನೀಡುತ್ತಿರಲಿಲ್ಲ. ಮನೆಯಿಂದ ಕಳುಹಿಸುತ್ತಿದ್ದ ಊಟಕ್ಕೂ ತಡೆಯೊಡ್ಡಿದ್ದರು. ಆ ಕ್ಷಣ ಈಗಲೂ ನೆನೆದರೆ ಎದೆ ಝಲ್‌ ಎನ್ನುತ್ತದೆ’ ಎನ್ನುತ್ತ ಗದ್ಗದಿತರಾದರು.

16 ಮಂದಿ ಹೋರಾಟಗಾರರು

‘ನಮ್ಮ ಚಿಕ್ಕಪ್ಪ ಗೋವಿಂದರಾವ್ ಅವರು ಬಾಲಗಂಗಾಧರ ತಿಲಕ ಅವರ ಅನುಯಾಯಿ. 1905ರಲ್ಲಿ ಬೆಳಗಾವಿಯ ಖಡೇ ಬಜಾರ್‌ನಲ್ಲಿ ವಿದೇಶಿ ಬಟ್ಟೆಗಳನ್ನು ಸುಡುವ ಚಳವಳಿ ನಡೆಸಿದ್ದರು. ಆಗ ಬ್ರಿಟಿಷ್‌ ಸರ್ಕಾರ ಅವರನ್ನು ಬಂಧಿಸಿ, ₹8ರಿಂದ ₹10 ದಂಡ ವಿಧಿಸಿತ್ತು. ಆ ಮೊತ್ತವನ್ನು ತಿಲಕರೇ ಭರಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಚಿಕ್ಕಪ್ಪನಿಗೆ ಪ್ರೇರೇಪಿಸಿದ್ದರು. ನಂತರ ಈ ಭಾಗದಲ್ಲಿ ಕಾಂಗ್ರೆಸ್‌ ಕಟ್ಟಿ ಬೆಳೆಸಿದರು. 1923ರಲ್ಲಿ ಅವರು ನಿಧನರಾದ ನಂತರ, ನಮ್ಮ ಇಡೀ ಕುಟುಂಬ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯಿತು’ ಎಂದರು.

‘ನನ್ನ ತಂದೆ, ಇಬ್ಬರು ಚಿಕ್ಕಂಪ್ಪಂದಿರು, ಐವರು ಸಹೋದರರು, ನಾಲ್ವರು ಸಹೋದರಿಯರು, ಸಹೋದರರ ಮೂವರು ಮಕ್ಕಳು ಸೇರಿ ನಮ್ಮ ಕುಟುಂಬದಲ್ಲಿ 16 ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು’ ಎಂದು ಮೆಲುಕು ಹಾಕಿದರು.

‘ಠಾಣೆಗಳಲ್ಲಿ ಬಾಂಬ್‌ ಇರಿಸುವುದು, ಗೂಡ್ಸ್‌ ರೈಲುಗಳನ್ನು ನಾಶಪಡಿಸುವುದು, ಟೆಲಿಫೋನ್ ವೈಯರ್ ಕತ್ತರಿಸುವುದು ಹೀಗೆ ನಾನಾ ರೀತಿಯಲ್ಲಿ ಆಂಗ್ಲರಿಗೆ ತೊಂದರೆ ಕೊಡುತ್ತಿದ್ದೆವು. ಗಣಪತಿ ಗಲ್ಲಿಯ ಸಾರ್ವಜನಿಕರ ವಾಚನಾಲಯದ ಮೇಲೆ ತಿರಂಗಾ ಧ್ವಜ ಹಾರಿಸಿದ್ದೆವು. ಆಗ ನನ್ನನ್ನು ಬಂಧಿಸಿ ಕ್ಯಾಂಪ್‌ ಠಾಣೆಯಲ್ಲಿ ಇಟ್ಟಿದ್ದರು. ನಂತರ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಿದ್ದರು. ಒಂದು ವರ್ಷ ಸೆರೆವಾಸ ಅನುಭವಿಸಿದ್ದೆ’ ಎಂದು ತಿಳಿಸಿದರು.

‘ಆರಂಭದಲ್ಲಿ ನಮ್ಮ ತಂದೆ ಮತ್ತು ಚಿಕ್ಕಪ್ಪ ಜೀವನರಾವ್ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರದ ದಿನಗಳಲ್ಲಿ ಹೋರಾಟದಲ್ಲಿದ್ದ 16 ಮಂದಿ ಪೈಕಿ 13 ಮಂದಿ ಬಂಧಿಸಿ, ಹಿಂಡಲಗಾ, ಮಹಾರಾಷ್ಟ್ರದ ರತ್ನಾಗಿರಿ ಮತ್ತು ನಾಶಿಕ್‌ ಕಾರಾಗೃಹಗಳಿಗೆ ಕಳುಹಿಸಿದರು’ ಎಂದು ಸ್ಮರಿಸಿದರು.

ನಮ್ಮ ಧ್ವಜ

‘ಬೆಳಗಾವಿ ವಿಭಾಗೀಯ ಆಯುಕ್ತರ ಕಚೇರಿ ಮೇಲೆ ಬ್ರಿಟಿಷ್‌ ಸರ್ಕಾರ ಧ್ವಜ ಹಾರಾಡುತ್ತಿತ್ತು.  ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಮಧ್ಯರಾತ್ರಿ ನಮ್ಮ ಧ್ವಜ ಏರುತ್ತಲೇ ಬೆಳಗಾವಿಗರ ಸಂಭ್ರಮ ಮುಗಿಲು ಮುಟ್ಟಿತು. ನಾವು ಪಟ್ಟ ಶ್ರಮ ಸಾರ್ಥಕವಾಯಿತೆಂದು ಸಮಾಧಾನವಾಯಿತು’ ಎಂದು ಸಂಭ್ರಮಿಸಿದರು.

‘ಪುಣೆಯಲ್ಲಿ ಡಿಪ್ಲೊಮಾ ಓದಿದ ನಾನು, ಬೆಳಗಾವಿಯಲ್ಲಿ ಎಲೆಕ್ಟ್ರಿಕಲ್‌ ಅಂಗಡಿ ತೆರೆದು ಬದುಕಿನ ಬಂಡಿ ದೂಡತೊಡಗಿದೆ. ನಾಲ್ವರು ಮಕ್ಕಳಿದ್ದಾರೆ. ಒಬ್ಬ ಪುತ್ರ ಡಾ.ನಿಶ್ಚಲ್‌ ರ್‍ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ನಲ್ಲಿದ್ದಾರೆ’ ಎಂದರು.

ಯಾಳಗಿ ಅವರ ಮನೆಗೆ ಮುಂಬೈ ಪ್ರಾಂತದ ಮುಖ್ಯಸ್ಥರಾಗಿದ್ದ ಬಾಳಾಸಾಹೇಬ ಖೇರ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ, ಸೇನಾಪತಿ ಬಾಪಟ್ ಮತ್ತಿತರ ಗಣ್ಯರು ಭೇಟಿ ಕೊಟ್ಟಿದ್ದಾರೆ. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಗೋವಿಂದರಾವ್‌ ಯಾಳಗಿ ಅವರಿಗೆ ಮಹಾತ್ಮ ಗಾಂಧೀಜಿ ಗೌರವ ಸಲ್ಲಿಸಿದ್ದಾರೆ. ವಿಠ್ಠಲರಾವ್‌ ಅವರಿಗೆ ಅನೇಕ ಪುರಸ್ಕಾರಗಳು ಸಂದಿವೆ. 

‘ಭ್ರಷ್ಟಾಚಾರ ನಿಲ್ಲಲಿ’
‘ಇಂದು ಎಲ್ಲ ರಂಗಗಳಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಿಲ್ಲಬೇಕು. ಆಗ ದೇಶ ಅಭಿವೃದ್ಧಿಯತ್ತ ಸಾಗುತ್ತದೆ’ ಎಂದು ವಿಠ್ಠಲರಾವ್‌ ಯಾಳಗಿ ಹೇಳಿದರು. ‘ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕಾಂಗ್ರೆಸ್‌ ಪಾತ್ರವೂ ಮುಖ್ಯವಾಗಿದೆ. ದೊಡ್ಡ ದೊಡ್ಡ ಜಲಾಶಯಗಳನ್ನು ಕಟ್ಟಿದ್ದು ಮತ್ತು ಅನೇಕ ತಂತ್ರಜ್ಞಾನಗಳನ್ನು ಪರಿಚಯಿಸಿದ ಶ್ರೇಯವೂ ಅದಕ್ಕೆ ಸಲ್ಲುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.