ADVERTISEMENT

ಬೆಳಗಾವಿಯಲ್ಲಿ ಭಾರತ–ಜಪಾನ್‌ ಯೋಧರ ಜಂಟಿ ಸಮರಾಭ್ಯಾಸ: ಮೈನವಿರೇಳಿಸಿದ ಕಾರ್ಯಾಚರಣೆ

ಫೆ.27ರಿಂದ ನಡೆಯುತ್ತಿರುವ ತರಬೇತಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 14:32 IST
Last Updated 8 ಮಾರ್ಚ್ 2022, 14:32 IST
ಬೆಳಗಾವಿಯಲ್ಲಿ ಭಾರತ–ಜಪಾನ್‌ ಯೋಧರ ಜಂಟಿ ಸಮರಾಭ್ಯಾಸ - ಪ್ರಜಾವಾಣಿ ಚಿತ್ರ / ಏಕನಾಥ ಅಗಸಿಮನಿ
ಬೆಳಗಾವಿಯಲ್ಲಿ ಭಾರತ–ಜಪಾನ್‌ ಯೋಧರ ಜಂಟಿ ಸಮರಾಭ್ಯಾಸ - ಪ್ರಜಾವಾಣಿ ಚಿತ್ರ / ಏಕನಾಥ ಅಗಸಿಮನಿ   

ಬೆಳಗಾವಿ: ಭಾರತ ಮತ್ತು ಜಪಾನ್‌ ನಡುವಿನ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್‌–2021’ 3ನೇ ಆವೃತ್ತಿ ಇಲ್ಲಿನ ಮರಾಠಾ ಲಘು ಪದಾತಿ ದಳ ಕೇಂದ್ರದಲ್ಲಿ (ಎಂಎಲ್‌ಐಆರ್‌ಸಿ) ಪ್ರಗತಿಯಲ್ಲಿದ್ದು, ಮಂಗಳವಾರ ಈ ಯೋಧರು ಭಯೋತ್ಪಾದನೆ ನಿಗ್ರಹ ಕುರಿತ ಅಣುಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅರಣ್ಯ ಹಾಗೂ ನಗರಪ್ರದೇಶದ ಸನ್ನಿವೇಶದಲ್ಲಿ ಭಯೋತ್ಪಾದನೆ ನಿಗ್ರಹ ಚಟುವಟಿಕೆಗಳ ಕಾರ್ಯಾಚರಣೆ ಕೈಗೊಳ್ಳಲು ಜಂಟಿ ತರಬೇತಿಯನ್ನು ಯೋಧರಿಗೆ ಫೆ.27ರಿಂದ ನೀಡಲಾಗುತ್ತಿದೆ. ಅದರ ಭಾಗವಾಗಿ ಮೂರು ದಿನಗಳ ಅಣಕು ಕಾರ್ಯಾಚರಣೆ ಮಂಗಳವಾರದಿಂದ ಆರಂಭಗೊಂಡಿದೆ. ಜಾಗತಿಕ ಭಯೋತ್ಪಾದನೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಉಭಯ ರಾಷ್ಟ್ರಗಳು ಎದುರಿಸುತ್ತಿರುವ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಈ ಅಭ್ಯಾಸ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.

ಹಳ್ಳಿಯೊಂದರಲ್ಲಿ ಉಗ್ರರ ಒತ್ತೆಯಲ್ಲಿರುವವರ ರಕ್ಷಣೆಗೆ ನಡೆಯುವ ಕಾರ್ಯಾಚರಣೆಯ ಅಣಕು ಪ್ರದರ್ಶಿಸಲಾಯಿತು. ಯೋಧರು ತಮ್ಮ ಕಾರ್ಯತಂತ್ರದ ಕೌಶಲವನ್ನು ಪ್ರದರ್ಶಿಸಿದರು. ಹಾರಾಡುತ್ತಾ ಧೂಳೆಬ್ಬಿಸುತ್ತಿದ್ದ ಹೆಲಿಕಾಪ್ಟರ್‌ನಿಂದ ಹಗ್ಗದ ಸಹಾಯದಿಂದ ನೆಲಕ್ಕಿಳಿದ ಶಸ್ತ್ರಸಜ್ಜಿತ ಸೈನಿಕರು, ರಕ್ಷಣಾ ಕಾರ್ಯಾಚರಣೆಗಿಳಿಯುವ ದೃಶ್ಯಗಳು ಮೈನವಿರೇಳಿಸಿದವು.

ಸೈನಿಕರಿಗೆ ಮಾರ್ಗದರ್ಶನ:

ಭಾರತೀಯ ಸೇನೆಯ 115 ಬ್ರಿಗೇಡ್‌ನ 40 ಹಾಗೂ ಜಪಾನ್‌ ಸೇನೆಯ 30–ಇನ್‌ಫೆಂಟ್ರಿ ರೆಜಿಮೆಂಟ್‌ನ 40 ಯೋಧರು ಜಂಟಿಯಾಗಿ ಪಾಲ್ಗೊಂಡಿದ್ದಾರೆ. ‘ಎಂಎಲ್‌ಐಆರ್‌ಸಿಯ ವಿದೇಶ ತರಬೇತಿ ಪ್ರದೇಶ’ದಲ್ಲಿ ತರಬೇತಿ ಪಡೆದ ಸೈನಿಕರಿಗೆ ಬೆಳಿಗ್ಗೆ ಕಾರ್ಯಾಚರಣೆಯ ಮಾಹಿತಿ–ಮಾರ್ಗದರ್ಶನ ನೀಡಲಾಯಿತು.

ಯೋಧರ ಕಾರ್ಯಾಚರಣೆಗೆ ಸಾಕ್ಷಿಯಾಗುವ ಅವಕಾಶವನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಲಾಗಿತ್ತು. ಕಾರ್ಯಾಚರಣಗೆ ಯೋಜನೆ ಸಿದ್ಧಪಡಿಸುವುದು, ತಂಡಗಳ ನಿಯೋಜನೆ, ಜವಾಬ್ದಾರಿ ಹಂಚಿಕೆ, ಹೆಲಿಕಾಪ್ಟರ್‌ ಬಳಸಿ ಸ್ಥಳವನ್ನು ತಲುಪುವುದು, ನಕ್ಷೆಗಳು ಮತ್ತು ತಂತ್ರಜ್ಞಾನದ ಬಳಕೆ ಮೊದಲಾದವುಗಳನ್ನು ಸೈನಿಕರು ಪ್ರದರ್ಶಿಸಿದರು.

ತಾಲ್ಲೂಕಿನ ಹಾಲಬಾವಿ ಹೊರವಲಯದಲ್ಲಿರುವ ಇಂಡೋ- ಟಿಬೆಟಿಯನ್‌ ಗಡಿ ಭದ್ರತಾ ಪಡೆಯ ತರಬೇತಿ ಕೇಂದ್ರ ಆವರಣಕ್ಕೆ ಹೆಲಿಕಾಪ್ಟರ್‌ನಲ್ಲಿ 4 ಸುತ್ತುಗಳಲ್ಲಿ ಬಂದಿಳಿದ ಭಾರತ- ಜಪಾನ್‌ ಯೋಧರು, ಹಳ್ಳಿಯೊಂದರ ಮನೆಯಲ್ಲಿ ಉಗ್ರರ ವಶದಲ್ಲಿದ್ದ ಇಬ್ಬರನ್ನು ರಕ್ಷಿಸುವ ಭಾಗವಾಗಿ ಕಾರ್ಯಾಚರಣೆ ನಡೆಸಿದರು.

‘ಇಂತಹ ಸನ್ನಿವೇಶದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಅರಂಭಿಸುವ ಮೊದಲು ಆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಹಾಗೂ ರೈಲು ಹಳಿಗಳ ಮೂಲಕ ಜನರು ಸಂಚರಿಸದಂತೆ ನಿರ್ಬಂಧಿಸಬೇಕು. ನದಿ, ಹಳ್ಳಗಳ ಕಡೆಗೂ ನಿಗಾ ವಹಿಸಬೇಕು. ಉಗ್ರರು ಆ ಸ್ಥಳ ಬಿಟ್ಟು ಬೇರೆಡೆಗೆ ಹೋಗದಂತೆ ನೋಡಿಕೊಳ್ಳಬೇಕು. ಆತುರಪಟ್ಟು ದಾಳಿ ನಡೆಸಿದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬಗ್ಗೆ ನಿಗಾ ವಹಿಸಬೇಕು‘ ಎಂದು 36 ರ‍್ಯಾಪಿಡ್‌ ಜನರಲ್‌ ಆಫೀಸರ್‌ ಕಮಾಂಡಿಂಗ್ (ಜಿಒಸಿ) ಮೇಜರ್‌ ಜನರಲ್ ಭವನಿಶ್‌ಕುಮಾರ್ ಅವರ ಸಲಹೆಯಂತೆ ಯೋಧರು ಎಚ್ಚರಿಕೆಯಿಂದ ಮುನ್ನಡೆದು, ಒತ್ತೆಯಾಳುಗಳ ರಕ್ಷಣೆಗೆ ಧಾವಿಸಿದರು.

ಭಾರತೀಯ ಸೇನೆ ಹಾಗೂ ಜಪಾನ್‌ ಸೇನೆ ನಡುವಿನ ರಕ್ಷಣಾ ಸಹಕಾರ ಮಟ್ಟ ಮತ್ತು ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸುವ ಉದ್ದೇಶ ಈ ಅಭ್ಯಾಸ ಕಾರ್ಯಕ್ರಮದ್ದಾಗಿದೆ ಎಂದು ಅಧಿಕಾರಿಗಳು ಹೇಳಿದರು.

115 ಬ್ರಿಗೇಡ್‌ನ ಕಮಾಂಡರ್‌ ಎನ್.ಎಸ್. ಸೋಹಲ್‌, ಜಪಾನ್‌ ಸೇನೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.