ಬೆಳಗಾವಿ: ತಾಲ್ಲೂಕಿನ ಸಾಂಬ್ರಾದಲ್ಲಿರುವ ಏರ್‌ಮನ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಟ್ರೇನಿ ಏರ್‌ಮನ್‌ಗಳ’ ನಿರ್ಗಮನ ಪಥಸಂಚಲನ ಕಾರ್ಯಕ್ರಮದ ವೇಳೆ ನಡೆದ ‘ಪ್ಯಾರಾಚೂಟ್’ನಿಂದ ಜಿಗಿಯುವ ಸಾಹಸ ನೆರೆದಿದ್ದವರ ಮೈನವಿರೇಳಿಸಿತು.
3,253 ಟ್ರೇನಿ ಏರ್‌ಮನ್‌ಗಳು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 24 ವಾರಗಳ ಕಠಿಣ ಬುನಾದಿ ತರಬೇತಿ ಪಡೆದಿರುವ ಅವರು, ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ. ಅತ್ಯಂತ ಕರಾರುವಕ್ಕಾಗಿ ಅವರು ಪ್ರಸ್ತುತಪಡಿಸಿದ ಪಥಸಂಚಲನ ಆಕರ್ಷಕವಾಗಿತ್ತು.
ಶಾಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಾಯುಸೇನೆಯ ‘ಏರ್ ಡೆವಿಲ್ಸ್’ ತಂಡದವರು ‘ಸ್ಕೈಡೈವಿಂಗ್ ಪ್ರದರ್ಶನ’ ನೀಡಿ ಎಲ್ಲರ ಮಚ್ಚುಗೆಗೆ ಪಾತ್ರವಾದರು. ಏರ್‌ಮನ್ ತರಬೇತಿ ಶಾಲೆಯ ವಿಂಗ್ ಕಮಾಂಡರ್ ಅಜಯ್ ಕುಮಾರ್ ಯಾದವ್ ನೇತೃತ್ವದಲ್ಲಿ ತಂಡದ ಆರು ಮಂದಿ ಸದಸ್ಯರು ಈ ಸಾಹಸ ಪ್ರದರ್ಶಿಸಿದರು. ಎಂಐ–17 ಹೆಲಿಕಾಪ್ಟರ್‌ನಿಂದ 8ಸಾವಿರ ಅಡಿಗಳ ಎತ್ತರದಿಂದ ಬಣ್ಣ ಬಣ್ಣದ ಪ್ಯಾರಾಚೂಟ್‌ಗಳನ್ನು ಕಟ್ಟಿಕೊಂಡು ಹಾರಿದ ಅವರು ಕವಾಯತು ಮೈದಾನದಲ್ಲಿ ಕರಾರುವಕ್ಕಾಗಿ ನಿಗದಿಪಡಿಸಿದ ಸ್ಥಳದಲ್ಲಿ ಇಳಿಯುವ ಮೂಲಕ ಎಲ್ಲರನ್ನೂ ರಂಜಿಸಿದರು.
ವಾಯುಸೇನಾ ಸಿಬ್ಬಂದಿ (ತರಬೇತಿ) ವಿಭಾಗದ ಸಹಾಯಕ ಮುಖ್ಯಸ್ಥ ಏರ್‌ವೈಸ್ ಮಾರ್ಷಲ್ ಸಂಜೀವ್ ರಾಜ್ ಮುಖ್ಯಅತಿಥಿಯಾಗಿ ಭಾಗವಹಿಸಿ ಪಥಸಂಚಲನ ವೀಕ್ಷಿಸಿ, ಗೌರವವಂದನೆ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ‘ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಸ್ಕೈಡೈವಿಂಗ್ ಕೌಶಲವನ್ನು ನಮ್ಮ ಯೋಧರು ಪ್ರದರ್ಶಿಸಿದ್ದಾರೆ. ಕಮಾಂಡರ್‌ಗಳು ಸಮರ್ಪಕವಾಗಿ ಹಾಗೂಸುರಕ್ಷಿತವಾಗಿ ಗುರಿ ಮುಟ್ಟಿದ್ದಾರೆ. ಯುವಜನರಿಗೆ ವಾಯುಸೇನೆಯ ಬಗ್ಗೆ ಮಾಹಿತಿ ನೀಡಿ ಅವರನ್ನು ಸೇರ್ಪಡೆಗೆ ಪ್ರೇರೇಪಿಸುವುದು ಇಂತಹ ಉಪಕ್ರಮಗಳ ಉದ್ದೇಶವಾಗಿದೆ’ ಎಂದು ತಿಳಿಸಿದರು.
ತರಬೇತಿ ಪಡೆದವರಲ್ಲಿ ಉತ್ತಮ ಸಾಧನೆ ತೋರಿದ ಆಕಾಶ್ (ಉತ್ತಮ ಜನರಲ್ ಸರ್ವಿಸ್ ಟ್ರೇನಿಂಗ್), ಓಂಕಾರ್ ಝಾ (ಅಕಾಡೆಮಿಕ್ಸ್‌ನಲ್ಲಿ ಉತ್ತಮ ಸಾಧನೆ), ಅಜಯ್ ಪ್ರತಾಪ್ ಸಿಂಗ್ (ಬೆಸ್ಟ್ ಮಾರ್ಕ್ಸ್‌ಮನ್) ಹಾಗೂ ಸಾಗರ್‌ನಾಥ್ (ಎಲ್ಲ ವಿಭಾಗಗಳಲ್ಲೂ ಪ್ರಥಮ ಸ್ಥಾನ) ಅವರಿಗೆ ಪಾರಿತೋಷಕಗಳನ್ನು ಪ‍್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.