ಬೆಳಗಾವಿ: ‘ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳವರು ವಸತಿನಿಲಯಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತು ಹಾಸ್ಟೆಲ್‌ಗಳಿಗೆ ಸೂಚನೆ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ತಿಳಿಸಿದರು.
ಇಲ್ಲಿ ಶನಿವಾರ ನಡೆದ ಕೋವಿಡ್ ನಿರ್ವಹಣೆ ಮತ್ತು ಲಸಿಕಾಕರಣ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
‘ಬೇರೆ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವುದು ಮತ್ತು ಮಾರ್ಗಸೂಚಿ ಪಾಲಿಸಿರುವ ಬಗ್ಗೆ ಆಯಾ ಕಾಲೇಜು ಆಡಳಿತ ಮಂಡಳಿ ಖಚಿತಪಡಿಸಿಕೊಳ್ಳಬೇಕು. ಮಧುಮೇಹ ಮತ್ತಿತರ ಕಾರಣಕ್ಕೆ ಬಹುತೇಕ ಕಡೆಗಳಲ್ಲಿ ಹಿರಿಯ ನಾಗರಿಕರು ಲಸಿಕೆ ಪಡೆಯದಿರುವುದು ಗಮನಕ್ಕೆ ಬಂದಿದೆ. ಅರ್ಹರೆಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
‘ಜಿಲ್ಲೆಯಲ್ಲಿ ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಉತ್ತಮ ಸಾಧನೆಯಾಗಿದೆ. ಅದೇ ರೀತಿ 2ನೇ ಡೋಸ್ ಲಸಿಕೆಗೆ ಅರ್ಹತೆ ಹೊಂದಿರುವವರಿಗೆ ಆದ್ಯತೆ ಮೇರೆಗೆ ನೀಡಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
‘ಧಾರವಾಡದ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗುತ್ತಿದೆ. ಅಧಿಕಾರಿಗಳು ಭೇಟಿ ನೀಡಿ ಆಡಳಿತ ಮಂಡಳಿಯವರ ಜೊತೆ ಚರ್ಚೆ ನಡೆಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.
‘15 ದಿನಗಳಲ್ಲಿ ನಗರದ ವಿವಿಧ ಕಾಲೇಜು–ಹಾಸ್ಟೆಲ್‌ಗಳಿಗೆ 293 ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯದಿಂದ ಬಂದಿದ್ದಾರೆ’ ಎಂದು ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಮಾಹಿತಿ ನೀಡಿದರು.
‘ಲಸಿಕೆ ಕೊರತೆ ಇಲ್ಲ’ ಎಂದು ಜಿಲ್ಲಾ ಲಸಿಕಾಕರಣ ಅಧಿಕಾರಿ ಡಾ.ಐ.ಪಿ. ಗಡಾದ ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ. ದರ್ಶನ್ ಹಾಗೂ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.