ಪ್ರಜಾವಾಣಿ ವಾರ್ತೆ
ರಾಮದುರ್ಗ: ‘ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಲು ಸಾರ್ವಜನಿಕರು ವಿಮಾ ಯೋಜನೆಗಳನ್ನು ಮಾಡಿಕೊಳ್ಳಬೇಕು’ ಎಂದು ಬೆಳಗಾವಿ ಕೆನರಾ ಲೀಡ್‌ಬ್ಯಾಂಕಿನ ಪಿ.ಆರ್. ಕುಲಕರ್ಣಿ ಹೇಳಿದರು.
ತಾಲ್ಲೂಕಿನ ತೋರಣಗಟ್ಟಿ, ಕಟಕೋಳ ಹಾಗೂ ನರಸಾಪೂರ ಗ್ರಾಮಗಳಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳ ಸಹಯೋಗದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಕಾರ್ಮಿಕರಿಗೆ ಹಮ್ಮಿಕೊಂಡ ಜನ ಸುರಕ್ಷೆ ಯೋಜನೆಗಳ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾಮಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆಯನ್ನು 18 ರಿಂದ 50 ವರ್ಷದ ಬ್ಯಾಂಕಿನ ಗ್ರಾಹಕರು ಮಾಡಿಸಬಹುದು. ವಾರ್ಷಿಕ ಕಂತು ₹436 ಇದ್ದು, ಸಹಜ ಸಾವು ಸಂಭವಿಸಿದರೂ ಪಾಲಸಿದಾರರ ವಾರಸುದಾರರಿಗೆ ₹2 ಲಕ್ಷ ವಿಮೆ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.
ಕಚೇರಿಯ ಜಿಲ್ಲಾ ಪ್ರಬಂಧಕ ಸಂಜೀವ ವಾಂಜೇರಿ ಮಾತನಾಡಿ, ಫೋನ್ ಮೂಲಕ ಬ್ಯಾಂಕ್ ಸಿಬ್ಬಂದಿ ಎಂದು ಕರೆ ಮಾಡಿ ಒಟಿಪಿ, ಪಿನ್‌ನಂ. ಕೇಳುತ್ತಾರೆ. ಅವರಿಂದ ಜಾಗೃತರಾಗಿರಬೇಕು. ಬ್ಯಾಂಕು ಎಂದಿಗೂ ಫೋನ್ ಮಾಡಿ ಮಾಹಿತಿ ಕೇಳುವುದಿಲ್ಲ ಎಂದು ತಿಳಿಸಿದರು.
ಮಹಾತ್ಮಾ ಗಾಂಧೀ ಉದ್ಯೋಗ ಖಾತರಿ ಎಲ್ಲ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಡ್ಡಾಯವಾಗಿ ಮಾಡಿಸುವುದಾಗಿ ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ ಭರವಸೆ ನೀಡಿದರು.
ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರ ಸಮಾಲೋಚಕ ಮಲ್ಲಿಕಾರ್ಜುನ ರಡ್ಡಿ ಗೊಂದಿ ಸಾಮಾಜಿಕ ಭದ್ರತೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ತೋರಣಗಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಿದ್ದಪ್ಪ ಮಾಯನ್ನವರ, ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಚೇತನ, ಪಿಡಿಒ ಮಲ್ಲಿಕಾರ್ಜುನ ಬೈಲವಾಡ, ಖಾಜಾಹುಸೇನ ಶಾಡಲಗೇರಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.