ADVERTISEMENT

ಬಿಜೆಪಿ ಸೋಲಿಗೆ ಒಳ ಒಪ್ಪಂದವೇ ಕಾರಣ: ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 15:33 IST
Last Updated 21 ಜುಲೈ 2024, 15:33 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ಬೆಳಗಾವಿ: ‘ಒಳ ಒಪ್ಪಂದದ ರಾಜಕಾರಣದಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಹಾನಿಯಾಗಿದೆ. ರಾಜ್ಯದಲ್ಲಿ 9 ಲೋಕಸಭೆ ಕ್ಷೇತ್ರಗಳಲ್ಲಿ ಸೋಲಲು ಒಳ ಒಪ್ಪಂದವೇ ಕಾರಣ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ‘ಒಳ ಒಪ್ಪಂದದಿಂದ ದಾವಣಗೆರೆ, ಬೀದರ್‌, ಕಲಬುರಗಿ, ರಾಯಚೂರು, ಕೊಪ್ಪಳ, ಚಾಮರಾಜನಗರ ಮೊದಲಾದ ಕ್ಷೇತ್ರಗಳಲ್ಲಿ ಸೋಲಾಯಿತು. ವಿ.ಸೋಮಣ್ಣ ಸೋಲಿಸಲು ನಮ್ಮವರೇ ₹6 ಕೋಟಿ ಕೊಟ್ಟಿದ್ದರು. ಶಾಮನೂರು ಶಿವಶಂಕರಪ್ಪ ಶಿವಮೊಗ್ಗಕ್ಕೆ ಹೋಗಿ, ಬಿ.ವೈ.ರಾಘವೇಂದ್ರ ಅವರಿಗೆ ಮತ ನೀಡಿ ಎನ್ನುತ್ತಾರೆ. ರೇಣುಕಾಚಾರ್ಯ ಅವರು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ವಿಷಯ ಈಗ ಹೊರಬರುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಯಲಿಗೆಳೆಯುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ‘15 ತಿಂಗಳಿನಿಂದ ಏನ್‌ ಮಾಡ್ತಿದ್ದರು, ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ತನಿಖೆ ಆರಂಭಿಸಬೇಕಿತ್ತು. ನಿಮಗೆ ತಾಕತ್ತಿದ್ದರೆ, ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ. ನಾವು ಹಿಂದೆ ಸರಿಯುವುದಿಲ್ಲ. ಇದರಿಂದ ನಮ್ಮಲ್ಲಿನ ಭ್ರಷ್ಟರೂ ಸಿಗುತ್ತಾರೆ’ ಎಂದರು.

ADVERTISEMENT

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಸಾರಾಯಿ ಹಂಚಲು ಬಳಸಿದ್ದಾರೆ. ಈ ಪ್ರಕರಣ ಸಭಾತ್ಯಾಗಕ್ಕೆ ಸೀಮಿತಗೊಳಿಸುವುದಿಲ್ಲ. ಸಿಬಿಐನಿಂದ ಎಲ್ಲ ಆಯಾಮಗಳಲ್ಲಿ ತನಿಖೆಯಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈಗ ಎಲ್ಲ ನಿಗಮಗಳಲ್ಲೂ ಹಗರಣ ಹೊರಬರುತ್ತಿವೆ. ಬಿಜೆಪಿಯವರದ್ದು ಶೇ 40ರಷ್ಟು ಕಮಿಷನ್‌ ಸರ್ಕಾರ ಎಂದು ಕಾಂಗ್ರೆಸ್‌ನವರು ಆರೋಪಿಸುತ್ತಿದ್ದರು. ಆದರೆ, ಈಗ ಕಾಂಗ್ರೆಸ್‌ನದ್ದು  ಶೇ 100ರಷ್ಟು ಭ್ರಷ್ಟ ಸರ್ಕಾರವಾಗಿದೆ. ಭ್ರಷ್ಟಾಚಾರದ ಹಣ ಅಮೇಥಿಯವರೆಗೂ ಹೋಗಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಅಸಮಾಧಾನಗೊಂಡಿದ್ದು, ಟೀಕೆ ಮಾಡುತ್ತಿದ್ದಾರೆ. ಗ್ಯಾರಂಟಿಗಳ ಮೇಲೆ ನಿರೀಕ್ಷೆ ಮಾಡಬೇಡಿ ಎನ್ನುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.