ADVERTISEMENT

ಬೆಳಗಾವಿ: ಮನಸೆಳೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 14:12 IST
Last Updated 21 ಜನವರಿ 2024, 14:12 IST
   

ಬೆಳಗಾವಿ: ಇಲ್ಲಿನ ಬಿ.ಎಸ್‌.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಎರಡನೇ ದಿನವಾದ ಭಾನುವಾರವೂ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಜನರು, ಬಗೆಬಗೆಯ ವಿನ್ಯಾಸಗಳ ಪತಂಗಗಳ ಹಾರಾಟ ಕಂಡು ಖುಷಿಪಟ್ಟರು. ತಮ್ಮ ಮೊಬೈಲ್‌ ಹಾಗೂ ಕ್ಯಾಮೆರಾಗಳಲ್ಲಿ ಉತ್ಸವದ ಕ್ಷಣಗಳನ್ನು ಸೆರೆಹಿಡಿದು ಸಂಭ್ರಮಿಸಿದರು.

ಇಂಡೋನೆಷ್ಯಾ, ಯುನೈಟೆಡ್‌ ಕಿಂಗಡಮ್‌, ಸ್ಲೋವೆನಿಯಾ, ನೆದರ್‌ಲ್ಯಾಂಡ್‌ನ 6 ಮಂದಿ ಆಟಗಾರರು ಹಾಗೂ ವಿವಿಧ ರಾಜ್ಯಗಳಿಂದ ಬಂದಿದ್ದ 37 ಆಟಗಾರರು ಡ್ರ್ಯಾಗನ್ ಕೈಟ್, ರಿಂಗ್‌ ಕೈಟ್‌, 40 ಅಡಿಯ ಫಿಷ್‌ ಕೈಟ್, ಸ್ಟಾರ್‌ ಕೈಟ್‌ ಮತ್ತಿತರ ‍‍ಪತಂಗ ಹಾರಿಸಿದರು.

ADVERTISEMENT

‘ಈಗ ಬೆಳಗಾವಿಯಲ್ಲಿ ನಡೆಯುತ್ತಿರುವುದು 14ನೇ ಆವೃತ್ತಿಯ ಗಾಳಿಪಟ ಉತ್ಸವ. ನಾನು ಮೊದಲ ಉತ್ಸವದಿಂದಲೂ ಭಾಗವಹಿಸುತ್ತಿದ್ದೇನೆ. ಬೆಳಗಾವಿಯಲ್ಲಿನ ಗಾಳಿಪಟ ಉತ್ಸವಕ್ಕೆ ವರ್ಷದಿಂದ ವರ್ಷಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದು ಬೆಂಗಳೂರಿನ ಆಟಗಾರ ವಿ.ಕೃಷ್ಣಾಜಿ ರಾವ್ ಹೇಳಿದರು.

‘ಅಯೋಧ್ಯೆಯಲ್ಲಿ ಹೊಸ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಮನ ಭಾವಚಿತ್ರವಿರುವ ಪತಂಗ ಹಾರಿಸಿದ್ದೇನೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ’ ಎಂದು ಬೆಳಗಾವಿಯ ಆಟಗಾರ ಸಂದೇಶ ಕಡ್ಡಿ ತಿಳಿಸಿದರು.

ಗಾಳಿಪಟ ಉತ್ಸವ ಅಂಗವಾಗಿ ಆಯೋಜಿಸಿದ್ದ ಉಮಂಗ್‌ ಯುವಜನೋತ್ಸವವನ್ನು ಕಿರಣ ಕುಲಕರ್ಣಿ ಉದ್ಘಾಟಿಸಿದರು. ರಾಜ್ಯ ಹಾಗೂ ಹೊರರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.