ಸುಧಾಕರ ತಳವಾರ
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಅಖಾಡಾದ ಸುತ್ತ ಸೇರಿದ ಅಪಾರ ಜನಸ್ತೋಮ, ಪ್ರೇಕ್ಷಕರ ಸಿಳ್ಳೆ–ಕೇಕೆ, ಚಪ್ಪಾಳೆಗಳ ಭೋರ್ಗರೆತ. ದೂರದ ದೇಶಗಳಿಂದ ಬಂದ ಪೈಲ್ವಾನರಲ್ಲಿ ಪುಳಕ. ತಮ್ಮ ಬಿಗಿ ಪಟ್ಟುಗಳಿಂದ, ಡಾವುಗಳಿಂದ ಎದುರಾಳಿಯನ್ನು ಚಿತ್‌ಗೊಳಿಸಿದಾಗ ಹೋಯ್ ಎಂಬ ಹರ್ಷೋದ್ಗಾರ...
ತಾಲ್ಲೂಕಿನ ಶಿರಗಾಂವದ ಐತಿಹಾಸಿಕ ಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಟ್ಟದ ಜಗಜಟ್ಟಿಗಳ ಕುಸ್ತಿ ಪಂದ್ಯಾವಳಿಯಲ್ಲಿ ಕಂಡುಬಂದ ಸನ್ನಿವೇಶಗಳಿವು.
ಈ ಊರಿನ ಇತಿಹಾಸ ಕೊಲ್ಹಾಪುರದ ಶಾಹೂ ಮಹಾರಾಜರೊಂದಿಗೆ ಬೆಸೆದುಕೊಂಡಿದೆ. ಕುಸ್ತಿ ಪ್ರಿಯರಾಗಿದ್ದ ಶಾಹೂ ಮಹಾರಾಜರ ಕಾಲದಿಂದಲೂ ಈ ಊರಿನ ಜನ ಕುಸ್ತಿ ಪರಂಪರೆ ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಬಸವೇಶ್ವರ ಜಾತ್ರೆ ಪ್ರಯುಕ್ತ ಅಂತರರಾಷ್ಟ್ರೀಯ ಮಟ್ಟದ ಜಂಗಿ ನಿಕಾಲಿ ಕುಸ್ತಿಗಳನ್ನು ಹಮ್ಮಿಕೊಳ್ಳುವ ಸಾಹಸ ಮುಂದುವರಿಸಿದ್ದಾರೆ. ಅದು ಕೂಡ ಅಂಥಿಂಥ ಕುಸ್ತಿಗಳಲ್ಲ ದೇಶ– ವಿದೇಶಗಳಲ್ಲಿ ಭಲೇ ಅನ್ನಿಸಿಕೊಂಡ ಪೈಲ್ವಾನರ ಕುಸ್ತಿಗಳನ್ನೇ ಏರ್ಪಡಿಸುತ್ತಾರೆ.
ಈಬಾರಿಯ ಕುಸ್ತಿಗಳ ವೀಕ್ಷಣೆಗಾಗಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹಸ್ರಾರು ಜನ ಸೇರಿದರು. ಬೆಗ್ಗೆಯಿಂದಲೇ ಟಂಟಂ, ದ್ವಿಚಕ್ರವಾಹನ, ಟ್ರ್ಯಾಕ್ಟರ್ ಸೇರಿದಂತೆ ಸಿಕ್ಕಸಿಕ್ಕ ವಾಹನಗಳಲ್ಲಿ ತಂಡೋಪತಂಡವಾಗಿ ಬಂದು ಸೇರಿದರು.
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾದ ಪ್ರಕಾಶ ಹುಕ್ಕೇರಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪವನ ರಮೇಶ ಕತ್ತಿ, ಶರತ್‌ಚಂದ್ರ ಕವಟಗಿಮಠ, ಗೌರವ ಮುತಾಲಿಕ ದೇಸಾಯಿ ಸರಕಾರ ಮೊದಲಾದವರು ಈ ಸಂಭ್ರಮಕ್ಕೆ ಮುನ್ನುಡಿ ಬರೆದರು.
ಬೆರಗುಗೊಳಿಸಿದ ಥಾಪಾ: ನೇಪಾಳದ ಕುಳ್ಳನೆಯ ಪೈಲ್ವಾನ್ ದೇವ ಥಾಪಾ ಅವರು ತಮ್ಮ ಎದುರಾಳಿ ಅಜಾನುಬಾಹು, ಹಿಮಾಚಲ ಪ್ರದೇಶದ ನವೀನ್ ಅವರನ್ನು ಚಿತ್ ಮಾಡಿದ ಪರಿ ಪ್ರೇಕ್ಷಕರನ್ನು ಬೆರಗುಗೊಳಿಸಿತು.
10 ನಿಮಿಷಕ್ಕೂ ಹೆಚ್ಚು ಕಾಲ ರೋಚಕ ಸೆಣಸಾಟ ನಡೆಸಿದ ಥಾಪಾ, ತನ್ನದೇ ಆದ ಶೈಲಿಯಲ್ಲಿ ನವೀನ್ ಅವರನ್ನು ವಿಸ್ಮಯ ರೀತಿಯಲ್ಲಿ ಸೋಲಿಸಿ ವಿಜಯಮಾಲೆ ಧರಿಸಿದರು. ಕಳೆದ ವರ್ಷ ಕೂಡ ಥಾಪಾ ಅವರ ಅದ್ಬುತ ಕುಸ್ತಿ ಆಟದ ವಿಡಿಯೊ ಸಾಕಷ್ಟು ಹರಿದಾಡಿತ್ತು. ಇದರಿಂದಾಗಿ ಪ್ರಸಕ್ತ ವರ್ಷವೂ ಥಾಪಾ ಅವರ ಕುಸ್ತಿ ನೋಡಲು ಜನ ಕಾತರರಾಗಿದ್ದರು. ಎಲ್ಲರೂ ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡರು.
ಮಧ್ಯಾಹ್ನವೇ ಆರಂಭವಾದ ಕುಸ್ತಿಗಳು ರಾತ್ರಿ 10ರ ನಂತರವೂ ಮುಂದುವರಿದವು. ‘ಕರ್ನಾಟಕ ಕೇಸರಿ’ ರತನಕುಮಾರ ಮಠಪತಿ ಅವರ ವೀಕ್ಷಕ ವಿವರಣೆ ಪ್ರೇಕ್ಷಕರ ಗಮನ ಸೆಳೆಯಿತು. ಮುಖಂಡರಾದ ಚಂದ್ರಕಾಂತ ಪೂಜಾರಿ, ಭೀಮಾ ಉದಗಟ್ಟಿ, ಬಾಳು ತೋಡಕರ, ಷಣ್ಮುಖ ಉದಗಟ್ಟಿ, ರಾಯಪ್ಪ ಬನ್ನೆ ಕಿರಣ ಪಾಟೀಲ, ಸಂಜು ಪೂಜಾರಿ, ಬ್ರಹ್ಮಾನಂದ ಬೇನಾಡಿ, ರಾಮಗೌಡ ಪಾಟೀಲ, ಬಸವೇಶ್ವರ ಜಾತ್ರಾ ಕಮೀಟಿ ಸದಸ್ಯರು, ಕುಸ್ತಿ ಪಂದ್ಯಾವಳಿಯ ದೇಣಿಗೆದಾರರು ಇದ್ದರು.
ಏಷಿಯನ್ ಚಾಂಪಿಯನ್ ಆದ ಪುಣೆಯ ಮಾವುಲೆ ಕೊಕಾಟೆ, ನೇಪಾಳದ ದೇವ್ ಥಾಪಾ, ಮುಧೋಳದ ಸುನೀಲ ಪಡತಾರೆ, ಹರ್ಯಾಣದ ಹರ್ದೀಪ್, ರವೀಂದ್ರಕುಮರ, ರೋಹಿಲ್, ಪವಣಕುಮಾರ್, ಕೊಲ್ಹಾಪುರ ಶಿಖಂದರ್ ಶೇಖ್, ಉಮೇಶ ಚವಾಣ, ಮಧುರಾದ ಪಾಲೇಂದರ್, ಪೃಥ್ವಿರಾಜ ಪಾಟೀಲ, ದೆಹಲಿಯ ಆಶೀಶ್ ಉಡಾ, ಅಮಿತ್ ಕುಮಾರ್, ಜೀತು ಗುಜರ್, ಇರಾನ್ ದೇಶದ ರುಜಾ, ದಾವಣಗೆರೆಯ ಕಾರ್ತಿಕ್ ಕಾಟೆ, ಧಾರವಾಡ ಕುಸ್ತಿ ಹಬ್ಬದ ಕೇಸರಿ ಸಂಗಮೇಶ ಕೌವಳ್ಳಿ, ಮುಧೋಳದ ಸುನೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.