ADVERTISEMENT

ನಿಬ್ಬೆರಗಾಗಿಸುವ ಜಲಯೋಗ ಸಾಧಕ: 3 ತಾಸು ನೀರಿನಲ್ಲಿ ತೇಲುವ 72ರ ವೃದ್ಧ!

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 6:01 IST
Last Updated 21 ಜೂನ್ 2024, 6:01 IST
ಯೋಗ ಸಾಧಕ ಪ್ರಕಾಶ ಬಸಲಿಂಗಪ್ಪ ಬೆಲ್ಲದ ಅವರು ನೀರಿನ ಮೇಲೆ ಪ್ರದರ್ಶಿಸಿದ ಶವಾಸನ
ಯೋಗ ಸಾಧಕ ಪ್ರಕಾಶ ಬಸಲಿಂಗಪ್ಪ ಬೆಲ್ಲದ ಅವರು ನೀರಿನ ಮೇಲೆ ಪ್ರದರ್ಶಿಸಿದ ಶವಾಸನ   

ಕಬ್ಬೂರ: 72 ವರ್ಷದ ಈ ಹಿರಿಯರು ಜಲಯೋಗದಲ್ಲಿ ವಿಶ್ವದಾಖಲೆ ಮಾಡಿದ್ದಾರೆ. ರಾಷ್ಟ್ರ– ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ನೀರಿನ ಮೇಲೆ ಮೂರು ತಾಸಿಗೂ ಅಧಕ ಸಮಯ ಲೀಲಾಜಾಲವಾಗಿ ಯೋಗದ ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಅವರ ಸಾಮರ್ಥ್ಯ, ಚುರುಕುತನ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಎಂಥವರನ್ನೂ ನಿಬ್ಬೆರಗು ಮಾಡುತ್ತದೆ.

ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದ ಪ್ರಕಾಶ ಬಸಲಿಂಗಪ್ಪ ಬೆಲ್ಲದ ಅವರೇ ಈ ಯೋಗ ಸಾಧಕ. ಬ್ಯಾಂಕ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅವರು 37 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ. 100 ಅಡಿ ಆಳದ ಬಾವಿಯಲ್ಲಿ ಜಲಯೋಗ ಮಾಡುವುದರಲ್ಲಿ ಸಿದ್ಧಹರಸ್ತರು. ಬಾವಿ ದಡದಲ್ಲಿ ತಮ್ಮ ಗುರುವಿನ ಮೂರ್ತಿಯನ್ನು ಸ್ಥಾಪಿಸಿಕೊಂಡು ಏಕಲವ್ಯನಂತೆ ಅವರೇ ಯೋಗ ಕಲಿತಿದ್ದು ವಿಶೇಷ.

ನಿಬ್ಬೆರಗು ಮಾಡುವ ಯೋಗಾಸನಗಳು: ನೀರಿನಲ್ಲಿ ನೇರವಾಗಿ ನಿಲ್ಲುವ ಜಲಸ್ತಂಭ ಆಸನ ಯಾರನ್ನಾದರೂ ನಿಬ್ಬೆರಗು ಮಾಡುತ್ತದೆ. ಸಾಕಷ್ಟು ಅಭ್ಯಾಸದ ಫಲವಾಗಿ ಈ ಯೋಗವನ್ನು ಪ್ರಕಾಶ ಅವರು ಸಿದ್ಧಿಸಿಕೊಂಡಿದ್ದಾರೆ. ಪರ್ವತಾಸನ, ಗರುಡಾಸನ, ವೃಕ್ಷಾಸನ, ಪದ್ಮಾಸನ, ಶವಾಸನ, ಗೋಮುಖಾಸನ, ಉತ್ಕಟಾಸನ, ಮಲ್ಕಾಸನ... ಹೀಗೆ ಹಲವಾರು ಜಲ ಯೋಗಾಸನಗಳು ಯುವಜನರಿಗೆ ಮಾದರಿಯಾಗಿವೆ.

ADVERTISEMENT

ಇಷ್ಟೆಲ್ಲ ಸಾಧನೆ ಮಾಡಿದ ಮೇಲೂ ಅವರು ಪ್ರಶಸ್ತಿಗಳ ಹಿಂದೆ ಬೀಳಲಿಲ್ಲ. ಅವರು ಒಡ್ಡಿದ ಸ್ಪರ್ಧೆ ಹಾಗೂ ವ್ಯಕ್ತಿತ್ವಕ್ಕೆ ಪ್ರಶಸ್ತಿ– ಬಹುಮಾನಗಳು ಹುಡುಕಿಕೊಂಡು ಬಂದಿವೆ.

ಪ್ರಕಾಶ ಹಾಗೂ ಜಯಶ್ರೀ ದಂಪತಿ ಮರಣಾನಂತರ ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ಕಾಲೇಜಿಗೆ ತಮ್ಮ ದೇಹಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಯೋಗ ಮಾಡಿದ ದೇಹ ವ್ಯರ್ಥವಾಗಬಾರದು ಎಂಬ ಸಂದೇಶ ನೀಡಿದ್ದಾರೆ.

–ಶೀತಲ ಜಕಾತಿ

ಯೋಗ ಸಾಧಕ ಪ್ರಕಾಶ ಬಸಲಿಂಗಪ್ಪ ಬೆಲ್ಲದ ಅವರು ಪ್ರದರ್ಶಿಸಿದ ಜಲಸ್ತಂಭ ಯೋಗಾಸನ
ಜಲಯೋಗಕ್ಕೆ ಹಲವು ವರ್ಷಗಳ ಪ್ರಯತ್ನ ಬೇಕು. ದೇಹದ ಲಯ ಮನಸ್ಸಿನ ಮಧುರತೆ ಮತ್ತು ಆತ್ಮದ ಸಾಮರಸ್ಯದಿಂದ ಈ ಯೋಗ ಸಿದ್ಧಿಸುತ್ತದೆ
ಪ್ರಕಾಶ ಬಸಲಿಂಗಪ್ಪ ಬೆಲ್ಲದ ಯೋಗ ಪರಿಣತ
ರಾಷ್ಟ್ರೀಯ ಪುರಸ್ಕಾರ:
ಮಹಾರಾಷ್ಟ್ರದ ದೂರ ದರ್ಶನವು ಪ್ರಕಾಶ ಅವರ ಸಾಧನೆಯನ್ನು ‘ಮಹಾರಾಷ್ಟ್ರ ಬುಕ್‍ ಆಫ್‍ ರೆಕಾರ್ಡ್‌’ನಲ್ಲಿ ದಾಖಲಿಸಿದೆ. ಜಗತ್ತಿನ ಶ್ರೇಷ್ಠ ಯೋಗ ಸಾಧಕರ ಪರಿಚಯ ಇರುವ ಈ ಪುಸ್ತಕದಲ್ಲಿ ಪ್ರಕಾಶ ಅವರ ಯೋಗಭಂಗಿ ಚಿತ್ರ ಮುಖಪುಟದಲ್ಲೇ ಇರುವುದು ಗಮನಾರ್ಹ. ಕೇಂದ್ರ ಸರ್ಕಾರದ ಆಯುಷ್‌ ಮಂತ್ರಾಲಯದಿಂದ ಯೋಗ ಸರ್ಟಿಫೀಕೆಟ್ ಬೋರ್ಡ್‍ದವರು 2020ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿದ್ದಾರೆ. ‘ಯೂನಿವರ್ಸಿಟಿ ಆಫ್‍ ಸೆಂಟ್ರಲ್‍ ಅಮೆರಿಕ’ದಿಂದ 2023ರಲ್ಲಿ ‘ಗೌರವ ಡಾಕ್ಟರೇಟ್’ ಪದವಿ ನೀಡಲಾಗಿದೆ. ಮುಂಬೈನ ‘ಡಾ.ಎಸ್.ರಾಧಾಕೃಷ್ಣನ್ ರಿಸರ್ಚ್ ಅಂಡ್‌ ವೆಲ್‍ಫೇರ್ ಅಸೋಸಿಯೇಷನ್’ ಅವರು ಕೂಡ 2021ರಲ್ಲಿ ‘ವಿಶ್ವದಾಖಲೆ’ ಪುಟದಲ್ಲಿ ಪ್ರಕಾಶ ಅವರ ಸಾಧನೆ ಸೇರಿಸಿದ್ದಾರೆ. ಇದೂವರೆಗೆ ಇಂಥ ಆರು ವಿಶ್ವಮಟ್ಟದ ದಾಖಲೆಗಳು ಇವರ ಹೆಸರಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.