ADVERTISEMENT

ಬೆಳಗಾವಿ: ನೀರಾವರಿ ನಿಗಮದ ಕಚೇರಿಗೆ ರೈತರಿಂದ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2024, 15:30 IST
Last Updated 11 ಮಾರ್ಚ್ 2024, 15:30 IST
<div class="paragraphs"><p>ಬೆಳಗಾವಿಯ ಕರ್ನಾಟಕ ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ರೈತರು ಸೋಮವಾರ ತಮ್ಮ ಜಾನುವಾರುಗಳನ್ನು ಕಟ್ಟಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು -ಪ್ರಜಾವಾಣಿ ಚಿತ್ರ</p></div>

ಬೆಳಗಾವಿಯ ಕರ್ನಾಟಕ ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ರೈತರು ಸೋಮವಾರ ತಮ್ಮ ಜಾನುವಾರುಗಳನ್ನು ಕಟ್ಟಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು -ಪ್ರಜಾವಾಣಿ ಚಿತ್ರ

   

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡಿರುವ ತಮಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿಗೆ ರೈತರು ಸೋಮವಾರ ಮುತ್ತಿಗೆ ಹಾಕಿದರು. ರಾತ್ರಿ 9ರ ನಂತರವೂ ಧರಣಿ ಮುಂದುವರಿಸಿದರು.

ಇಲ್ಲಿನ ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆ ಮೈದಾನದಲ್ಲಿ ಸಮಾವೇಶಗೊಂಡ ಮಾಸ್ತಿಹೊಳಿ, ಬೀರನಹೊಳಿ, ಗುಡಗನಟ್ಟಿ ಮತ್ತು ಹತ್ತರಗಿಯ ರೈತರು, ಚಕ್ಕಡಿ ಮತ್ತು ಜಾನುವಾರುಗಳೊಂದಿಗೆ ರಾಣಿ ಚನ್ನಮ್ಮನ ವೃತ್ತಕ್ಕೆ ಆಗಮಿಸಿ ಧರಣಿ ಕೈಗೊಂಡರು.

ADVERTISEMENT

ನಂತರ ನೀರಾವರಿ ನಿಗಮದ ಕಚೇರಿಗೆ ನುಗ್ಗಿದರು. ಅವರನ್ನು ತಡೆಯಲು ಯತ್ನಿಸಿದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಬಳಿಕ, ಕಚೇರಿ ಆವರಣದಲ್ಲೇ ಜಾನುವಾರುಗಳನ್ನು ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಯೇ ಒಲೆ ಹೂಡಿ ಅಡುಗೆ ಮಾಡಿ ಊಟ ಮಾಡಿದರು.

‘ಹಿಡಕಲ್‌ ಜಲಾಶಯದ ಹಿನ್ನೀರಿನಲ್ಲಿ ಕಳೆದುಕೊಂಡ 394.26 ಎಕರೆ ಜಮೀನಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವೂ ನಮ್ಮ ಪರವಾಗಿದೆ. ಆದರೆ, ಅಧಿಕಾರಿಗಳು ಪರಿಹಾರ ನೀಡದೆ ಸತಾಯಿಸುತ್ತಿದ್ದಾರೆ. ಪರಿಹಾರಕ್ಕಾಗಿ ನಾಲ್ಕು ದಶಕಗಳಿಂದ ಅಲೆದಾಡುತ್ತಿದ್ದೇವೆ’ ಎಂದು ದೂರಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಜ.22ರಂದು ಸಭೆ ನಡೆಸಿ, ಸಂತ್ರಸ್ತ ರೈತರಿಗೆ ಫೆ.28ರೊಳಗೆ ಪರಿಹಾರ ಮೊತ್ತದ ಚೆಕ್‌ ನೀಡಬೇಕು ಎಂದು ಸೂಚಿಸಿದ್ದರು. ಆದರೆ, ಅಧಿಕಾರಿಗಳು ಈವರೆಗೂ ಪರಿಹಾರ ಕೊಡುತ್ತಿಲ್ಲ. ಬದಲಿಗೆ, ನಿಮ್ಮ ಭೂಮಿ ಸ್ವಾಧೀನಪಡಿಸಿ ಕೊಂಡಿದ್ದೇವೆ ಎಂದು ಮಾರ್ಚ್ 6ರಂದು ರಾತ್ರಿ ನೋಟಿಸ್‌ ಕೊಟ್ಟಿದ್ದಾರೆ. ಸಚಿವರಿಗೂ ತಪ್ಪು ಮಾಹಿತಿ ನೀಡಿ, ರೈತರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಸಂಧಾನ ಸಭೆ ವಿಫಲ: ಜಿಲ್ಲಾಧಿಕಾರಿ ನಿತೇಶ್‌ ‍ಪಾಟೀಲ ರೈತರ ಜತೆ ಸಭೆ ನಡೆಸಿದರು. ‘ನಾವೇನೂ ಭಿಕ್ಷೆ ಕೇಳುತ್ತಿಲ್ಲ. ನಮಗೆ ಸಿಗಬೇಕಾದ ಪರಿಹಾರ ಕೊಡಿ’ ಎಂದು ರೈತರು ಆಗ್ರಹಿಸಿದರು. ಎರಡು ಗಂಟೆಗೂ ಅಧಿಕ ಹೊತ್ತು ನಡೆದ ಸಂಧಾನ ಸಭೆ ವಿಫಲವಾಯಿತು. ನಂತರ ಧರಣಿ ಚುರುಕುಗೊಳಿಸಿದ ರೈತರು, ನೀರಾವರಿ ನಿಗಮದ ಮೂವರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.

‘ನೀರಾವರಿ ನಿಗಮದ ಕೆಲವು ಅಧಿಕಾರಿಗಳು 20 ವರ್ಷಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ’ ಎಂದು ರೈತ ಮುಖಂಡ ಬಾಳೇಶ ಮಾವನೂರೆ ಆರೋಪಿಸಿದರು.

‘ಮೂರು ಹಂತಗಳಲ್ಲಿ ಭೂಮಿ ವಿಭಾಗಿಸಿ, ಈಗ ಕೆಲವು ರೈತರಿಗೆ ಪರಿಹಾರ ಕೊಡುತ್ತೇವೆ. ನಂತರ ಉಳಿದವರಿಗೂ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಕೊಡುವುದಾದರೆ 394.26 ಎಕರೆ ಜಮೀನಿಗೂ ಏಕಕಾಲಕ್ಕೆ ಪರಿಹಾರ ಕೊಡಿ’ ಎಂದು ಒತ್ತಾಯಿಸಿದರು.

‘ಈ ಪ್ರತಿಭಟನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದರೆ ಜಿಲ್ಲಾಡಳಿತವೇ ನೇರಹೊಣೆ’ ಎಂದರು.

ಹೊಸ ‍ಪ್ರಸ್ತಾವಕ್ಕೆ ಸೂಚನೆ: ಜಿಲ್ಲಾಧಿಕಾರಿ

‘ಹಿಡಕಲ್‌ ಜಲಾಶಯ ಯೋಜನೆಗೆ ಬಳಸಿದ ಜಮೀನಿಗೆ ಹೊಸ ಭೂಮಿ ಸ್ವಾಧೀನ ಕಾಯ್ದೆ ಅಡಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸೋಮವಾರವೇ ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದರು.

ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘137 ಎಕರೆ 9 ಗುಂಟೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡ ಹಾಗೂ 156 ಎಕರೆಗೆ ಪರಿಹಾರ ನೀಡಿದ ಬಗ್ಗೆ ಯಾವುದೇ ದಾಖಲೆ ಇಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.