ಮೂಡಲಗಿ: ‘ಹಗ್ಗ ಕಟ್ಟಿ ಎಳೆಯದೆ ಸಾಗುವ ರಥ’ ಎಂದು ಪವಾಡ ಪ್ರಸಿದ್ಧಿಯನ್ನು ಹೊಂದಿರುವ ತಾಲ್ಲೂಕಿನ ಸುಣಧೋಳಿಯ ಜಡಿಸಿದ್ಧೇಶ್ವರ ರಥೋತ್ಸವವು ಮಠಾಧೀಶ ಶಿವಾನಂದ ಸಾಮೀಜಿ ಸಾನ್ನಿಧ್ಯದಲ್ಲಿ ಸಹಸ್ರಾರ ಭಕ್ತರ ಜಯಘೋಷಗಳೊಂದಿಗೆ ಶನಿವಾರ ಸಂಜೆ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಜಡಿಸಿದ್ಧೇಶ್ವರ ಸನ್ನಿಧಿಗೆ ಅಭಿಷೇಕ, ವಿಶೇಷ ಪೂಜೆಗಳು ಜರುಗಿದವು. ಸಂಜೆ ರಥೋತ್ಸವದ ಪೂರ್ವದಲ್ಲಿ ಗ್ರಾಮಾಂತರ ಕಳಸದ ಪೂಜೆ ಜರುಗಿತು. ಸಂಪ್ರದಾಯದಂತೆ ತಿಗಡಿ, ಮಸಗುಪ್ಪಿ, ಪಟಗುಂದಿ, ಭೈರನಟ್ಟಿ, ಲಕ್ಷ್ಮೇಶ್ವರ, ಹೊನಕುಪ್ಪಿ ಮತ್ತು ಗೋಸಬಾಳ ಗ್ರಾಮ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಂಡರು. ಮಠಾಧೀಶ ಶಿವಾನಂದ ಸ್ವಾಮೀಜಿ ರಥಕ್ಕೆ ಪೂಜೆಯನ್ನು ಸಲ್ಲಿಸಿ ರಥದಲ್ಲಿ ಆಸೀನರಾದರು.
ನಂದಿಕೋಲು ಸಂಭ್ರಮ: ನಂದಿಕೋಲು, ಚಾಮರ, ದೀವಟಿಗಳ ಪ್ರದರ್ಶನವು ಎಲ್ಲರ ಕಣ್ಮನ ಸೆಳೆಯಿತು. ಡೊಳ್ಳು, ವಾಲಗ, ತಮಟೆ, ಕರಡಮಜಲು, ಭಜನೆ, ಶಹನಾಯಿ, ಗಂಟೆ ವಾದ್ಯಗಳ ಕಿವಿಗಡಚುಕ್ಕುವ ಶಬ್ಧದ ಮಧ್ಯದಲ್ಲಿ ಸೇರಿದ ಭಕ್ತರು ‘ಶಂಭೋ, ಹರ, ಹರ ಮಹಾದೇವ..’ ಎಂದು ಒಕ್ಕೋರಳಿನಲ್ಲಿ ಜಪವನ್ನು ಹೇಳುತ್ತಿದ್ದಂತೆ ರಥವು ಮಠದ ಸ್ಥಳದಿಂದ ಸಾಗಿ ಮತ್ತೆ ಮರಳಿ ಮೂಲ ಸ್ಥಳವನ್ನು ತಲುಪಿತು. ರಥವು ಸಾಗಿ ಬರುವ ದಾರಿಯುದ್ದಕ್ಕೂ ಭಕ್ತರು ತೆಂಗು, ಬಾಳೆಹಣ್ಣು, ಉತ್ತುತ್ತಿ, ಬತ್ತಾಸು, ಹೂವನ್ನು ಭಕ್ತಿಯಿಂದ ಸಮರ್ಪಿಸಿ ಧನ್ಯತೆ ಮೆರೆದರು.
ರಥೋತ್ಸವದಲ್ಲಿ ಕರ್ನಾಟಕ ಸೇರಿದಂತೆ ಆಂದ್ರ, ತಮಿಳುನಾಡು, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಭಕ್ತರು ಸೇರಿದ್ದರು. ರಥೋತ್ಸವ ನಂತರ ಜರುಗಿದ ಅನ್ನಸಂರ್ಪಣೆಯಲ್ಲಿ ಜಾತಿ, ಧರ್ಮ, ಮೇಲು, ಕೀಳು ಎನ್ನದೆ ಸಮಪಂಥಿಯಲ್ಲಿ ಭಾಗವಹಿಸಿ ಸೌಹಾರ್ದತೆಗೆ ಸಾಕ್ಷಿಯಾದರು.
ಜಡೆಪ್ಪನ ವರಪ್ರಸಾದ
ರಥ ಸಾಗುವಾಗ ಭಕ್ತರು ಪೂರ್ಣ ತೆಂಗಿನ ಕಾಯಿಯನ್ನು ಎಸೆಯುವುದು ಜಾತ್ರೆಯಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಜನರಿಗೆ ಬಡಿದು ರಕ್ತ ಸೋರಿದರು ಸಹ ‘ಅದು ಜಡೆಪ್ಪನ ವರಪ್ರಸಾದ’ ಎಂದು ಭಕ್ತರ ನಂಬಿಕೆಯಾಗಿದೆ. ರಥೋತ್ಸವದಲ್ಲಿ ಭಾಗವಹಿಸುವ ಸಾಕಷ್ಟು ಭಕ್ತರು ಈ ಅನುಭವನ್ನು ಪಡೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.