ADVERTISEMENT

ಸೋತಲ್ಲಿ ಸಚಿವರ ತಲೆದಂಡ ಸಾಧ್ಯವೇ: ಜಗದೀಶ ಶೆಟ್ಟರ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 15:37 IST
Last Updated 4 ಜೂನ್ 2024, 15:37 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಬೆಳಗಾವಿ: ‘ಕಾಂಗ್ರೆಸ್‌ ಸೋತ ಕಡೆಯಲೆಲ್ಲ ಸಚಿವರ ತಲೆದಂಡ ಸಾಧ್ಯವೇ? ಹೀಗೆ ತಲೆದಂಡ ಮಾಡಿದರೆ, ರಾಜ್ಯ ಸರ್ಕಾರವೇ ತಲೆದಂಡ ತೆರಬೇಕಾಗುತ್ತದೆ’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

‘ಸಚಿವರ ಮಕ್ಕಳು, ಬಂಧುಗಳಿಗೆ ಟಿಕೆಟ್‌ ಕೊಟ್ಟು ತಂತ್ರ ಹೂಡಿದ ಕಾಂಗ್ರೆಸ್‌ ಈಗ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಗೊತ್ತಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೇ ನನಗೆ 51 ಸಾವಿರ ಮತ ಮುನ್ನಡೆ ಸಿಕ್ಕಿದೆ. ಅವರ ಯಾವ ಗ್ಯಾರಂಟಿಗಳನ್ನೂ ಜನ ಒಪ್ಪಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌’ ಎಂದು ಪ್ರಧಾನಿ ಮೋದಿ ಘೋಷಿಸಿ ವಿರೋಧ ಪಕ್ಷಗಳನ್ನು ಕಕ್ಕಾಬಿಕ್ಕಿ ಮಾಡಿದರು. ಇದೇ ಮಾತಿನ ಮೇಲೆ ವಿರೋಧಿಗಳು ಚರ್ಚೆ– ಗೊಂದಲದಲ್ಲಿ ಬೀಳಬೇಕು ಎಂಬ ಉದ್ದೇಶಕ್ಕೆ ಹೀಗೆ ಹೇಳಿದ್ದರು’ ಎಂದರು.

ADVERTISEMENT

‘ಡಿ.ಕೆ.ಸುರೇಶ್‌ ಸೋಲಿನ ಕಾರಣ ಮುಖ್ಯಮಂತ್ರಿ– ಉಪಮುಖ್ಯಮಂತ್ರಿ ನಡುವೆ ಕಲಹ ಮತ್ತಷ್ಟು ಹೆಚ್ಚಲಿದೆ. ರಾಜ್ಯ ಸರ್ಕಾರ ಅತಿಸೂಕ್ಷ್ಮ ಸ್ಥಿತಿಯಲ್ಲಿದೆ’ ಎಂದರು.

ತಲಾ ₹1 ಲಕ್ಷ ವಸೂಲಿ:

‘ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಂದ ತಲಾ ₹1 ಲಕ್ಷ ವಸೂಲಿ ಮಾಡಲಾಗಿದೆ. ಆ ಹಣವನ್ನು ಸಚಿವೆ ತಮ್ಮ ಪುತ್ರನ ಚುನಾವಣಾ ಖರ್ಚಿಗೆ ಬಳಸಿದ್ದಾರೆ. ಸಚಿವೆಯ ದುರಾಹಂಕಾರ ಹಾಗೂ ಮಹಾನಾಯಕನ ಪಾಪಕರ್ಮದ ಫಲವಾಗಿ ಅವರಿಗೆ ಸೋಲಾಗಿದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಆರೋಪಿಸಿದರು.

‘ಬಿಜೆಪಿ ಕಾರ್ಯಕರ್ತರೇ ಹಣ ಖರ್ಚು ಮಾಡಿ, ಊಟ ಕಟ್ಟಿಕೊಂಡು ಬಂದು ಶೆಟ್ಟರ್‌ ಅವರನ್ನು ಗೆಲ್ಲಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.