ಬೆಳಗಾವಿ: ‘ದೇಶ ಮತ್ತು ಸಮಾಜಕ್ಕಾಗಿ ಸಮರ್ಪಿತ ಸೇವೆ ಸಲ್ಲಿಸಿದ ಐಸಿಎಂಆರ್–ಎನ್‌ಐಟಿಎಂ ಕಾರ್ಯ ಶ್ಲಾಘನೀಯ’ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ ಹೇಳಿದರು.
ಇಲ್ಲಿನ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್–ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೇಡಿಷನಲ್ ಮೆಡಿಸಿನ್(ಐಸಿಎಂಆರ್–ಎನ್‌ಐಟಿಎಂ)ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೋವಿಡ್–19 ನಿರ್ವಹಣೆಯಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ತಪಾಸಣೆ, ಲಸಿಕೆ ಅಭಿವೃದ್ಧಿಗೆ ಸಂಬಂಧಿಸಿ ಹಲವು ಚಟುವಟಿಕೆ ಕೈಗೊಂಡು, ದೇಶಕ್ಕೆ ಮಹತ್ವದ ಕೊಡುಗೆ ನೀಡಿದೆ. ಇಲ್ಲಿ ಸೇವೆ ಸಲ್ಲಿಸುವವರು ತಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಮನುಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು’ ಎಂದು ಪ್ರಶಂಸಿಸಿದರು.
‘ಜಗತ್ತಿನ ಆರು ಭಾಗದಲ್ಲಿ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿದ ಭಾರತ ನಿದ್ರಾವಸ್ಥೆಯಲ್ಲಿರುವ ದೈತ್ಯ ಶಕ್ತಿಯಲ್ಲ. ಬದಲಿಗೆ, ಅಭಿವೃದ್ಧಿಪಥದಲ್ಲಿ ಸಾಗುತ್ತಿರುವ ರಾಷ್ಟ್ರವಾಗಿದೆ. ಈ ದೇಶದ ಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಕೀಲುನೋವು, ಮಧುಮೇಹ ಮತ್ತು ಅತಿಸಾರ ಸವಾಲಿನಿಂದ ಕೂಡಿದ ಕಾಯಿಲೆಗಳು. ಕೀಲು ನೋವಿನ ಸಮಸ್ಯೆಗೆ ನಾವು ಪಾರಂಪರಿಕ ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ಮಧುಮೇಹಕ್ಕೆ ಸಾವಯವ ಪದ್ಧತಿಯಲ್ಲೇ ಪರಿಹಾರ ಹುಡುಕುತ್ತಿದ್ದೇವೆ. ರಾಸಾಯನಿಕಗಳ ಗೊಡವೆಯೇ ಇಲ್ಲದೆ, ಪಾರಂಪರಿಕ ಔಷಧಗಳ ಈ ಕಾಯಿಲೆಗಳನ್ನು ಗುಣಪಡಿಸಬಹುದು.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ದುರ್ಬಲ ವರ್ಗದವರಿಗೆ ಸರಿಯಾಗಿ ಚಿಕಿತ್ಸೆ ಲಭಿಸಿದರೆ, ಅದು ಬದಲಾವಣೆಗೆ ಕಾರಣವಾಗುತ್ತದೆ’ ಎಂದರು.
ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ ಕಾರ್ಯದರ್ಶಿಯೂ ಆಗಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಮಹಾನಿರ್ದೇಶಕ ಡಾ.ರಾಜೀವ್ ಬಹ್ಲ್, ‘ಭಾರತದಲ್ಲಿ ಬಯೋಮೆಡಿಕಲ್ ಸಂಶೋಧನೆಯಲ್ಲಿ ಐಸಿಎಂಆರ್ ಸದಾ ಮುಂಚೂಣಿಯಲ್ಲಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ ಲಸಿಕೆ ಅಭಿವೃದ್ಧಿ, ಸೋಂಕು ಪತ್ತೆ ಹಚ್ಚುವುದು, ಸೋಂಕಿನ ಮೇಲೆ ನಿಗಾ ಇರಿಸಲು ತಂತ್ರಜ್ಞಾನ ಅಭಿವೃದ್ಧಿ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಮುಂದಿನ ದಶಕದಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಿ, ದೇಶವನ್ನು ವಿಕಸಿತ ಭಾರತದತ್ತ ಕೊಂಡೊಯ್ಯಲಿದೆ. ಸುಧಾರಿತ ಚಿಕಿತ್ಸೆಗಳನ್ನು ಜನರಿಗೆ ಕೈಗೆಟುಕುವ ಶುಲ್ಕದಲ್ಲಿ ತಲುಪಿಸಲಿದೆ’ ಎಂದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ಐಸಿಎಂಆರ್–ಎನ್‌ಐಟಿಎಂ ನಿರ್ದೇಶಕ ಸುಬರ್ನಾ ರಾಯ್, ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ ಜಂಟಿಕಾರ್ಯದರ್ಶಿ ಅನು ನಗರ್, ಡಾ.ಆರ್.ಲಕ್ಷ್ಮಿನಾರಾಯಣ ಇತರರಿದ್ದರು.
ಪ್ರದರ್ಶನ ವೀಕ್ಷಣೆ: ಐಸಿಎಂಆರ್–ಎನ್‌ಐಟಿಎಂನಿಂದ ಕೈಗೊಂಡ ಸಂಶೋಧನಾ ಚಟುವಟಿಕೆಗಳನ್ನು ಇಲ್ಲಿ ಪ್ರದರ್ಶಿಸಲಾಯಿತು. ಜಗದೀಪ್ ಧನಕರ್ ಅದನ್ನು ವೀಕ್ಷಿಸಿದರು. ಅಲ್ಲದೆ, ಪ್ರಯೋಗಾಲಯಕ್ಕೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ಔಷಧೀಯ ಸಸಿ ನೆಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.