ಬೆಳಗಾವಿ: ದಶಲಕ್ಷಣ ಪರ್ವ ಹಾಗೂ ಶೋಡಷ ಸಮಾರೋಪದ ಅಂಗವಾಗಿ ಜೈನ ಸಮುದಾಯದಿಂದ ನಗರದಲ್ಲಿ ಶನಿವಾರ ವೈಭವದ ಮೆರವಣಿಗೆ ನಡೆಯಿತು. ಹಲವು ಶ್ರಾವಕ, ಶ್ರಾವಕಿಯರು, ಮಕ್ಕಳು ಕುದುರೆಗಳ ಮೇಲೆ ಕುಳಿತು, ಕಿರೀಟ ಧರಿಸಿ, ಧರ್ಮಧ್ವಜಗಳನ್ನು ಹಿಡಿದು ಗಮನ ಸೆಳೆದರು.
ಇಲ್ಲಿನ ದೊಡ್ಡ ಬಸದಿ ಹಾಗೂ ಚಿಕ್ಕ ಬಸದಿಗಳಲ್ಲಿ ಸಮುದಾಯದ ಮುಖಂಡರು ಪೂಜೆ ಸಲ್ಲಿಸಿದರು. ನಂತರ ಚಿಕ್ಕಬಸದಿಯಿಂದ ಆರಂಭವಾದ ಮೆರವಣಿಗೆ ರವಿವಾರ ಪೇಡೆ, ಬಸವನಗಲ್ಲಿ, ರಾಮಲಿಂಗ ಖಿಂಡ ಗಲ್ಲಿ, ಕುಲಕರ್ಣಿ ಗಲ್ಲಿ, ಶೇರಿ ಗಲ್ಲಿ ಮಾರ್ಗದಲ್ಲಿ ಸಂಚರಿಸಿ ಮತ್ತೆ ಚಿಕ್ಕ ಬಸದಿಗೆ ಬಂದು ಸಮಾಪನಗೊಂಡಿತು. ಇದರೊಂದಿಗೆ ತೀರ್ಥಂಕರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು.
‘ಜೈನ ಸಮುದಾಯದವರು 16 ದಿನಗಳ ಉಪವಾಸ ವ್ರತ ಆಚರಿಸುವುದು ದಶಲಕ್ಷಣ ಪರ್ವದ ಮುಖ್ಯ ಘಟ್ಟ. ಈ ಅವಧಿಯಲ್ಲಿ ಹತ್ತು ದಿನಗಳ ಕಾಲ ಬಸದಿಗಳಲ್ಲಿ ನಿರಂತರ ಪೂಜೆ, ಧ್ಯಾನ, ತೀರ್ಥಂಕರ ಜಪ ಮಾಡಲಾಗುತ್ತದೆ. ಇದರಿಂದ ಬದುಕಿನಲ್ಲಿ ನೆಮ್ಮದಿ ಸಿಗುತ್ತದೆ. ದೇವರ ಕೃಪೆಗೆ ಪಾತ್ರರಾಗಲು ಈ ಕ್ರಿಯೆಗಳು ಪ್ರಮುಖವಾಗಿವೆ’ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಚಿಕ್ಕಬಸಿದಿ ಆರಾಧನಾ ಮಹಿಳಾ ಮಂಡಳ ಅಧ್ಯಕ್ಷೆ ಸುರೇಖಾ ಗೌರಗೊಂಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.