ಬೆಳಗಾವಿ: ‘ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ಸಾಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಲಗಾದ ಜೈನ ಆಶ್ರಮದಲ್ಲಿ ಸಿದ್ಧಸೇನ ರಿಸರ್ಚ್ ಫೌಂಡೇಷನ್ ಮಂಗಳವಾರ ಆಯೋಜಿಸಿದ್ದ ಭಗವಾನ ಮಹಾವೀರ ತೀರ್ಥಂಕರರ 2550ನೇ ನಿರ್ವಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.
‘ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರು ಅಹಿಂಸೆಯ ಮೂರ್ತ ರೂಪವಾಗಿದ್ದರು. ಅವರ ಜೀವನ ತ್ಯಾಗ ಮತ್ತು ತಪಸ್ಸಿನಿಂದ ತುಂಬಿತ್ತು. ಸಂಯಮ, ಪ್ರೀತಿ, ಕರುಣೆ, ಭಕ್ತಿ ಮತ್ತು ಸದ್ಗುಣ ಅವರ ಜೀವನಕ್ಕೆ ಆಧಾರವಾಗಿತ್ತು. ನೀವೂ ಬದುಕಿ ಮತ್ತು ಇತರರನ್ನು ಬದುಕಲು ಬಿಡಿ ಎಂದು ಸಂದೇಶ ಸಾರಿದ್ದರು’ ಎಂದು ಸ್ಮರಿಸಿದರು.
‘ಬಾಲಾಚಾರ್ಯ ಸಿದ್ಧಸೇನ ಮಹಾರಾಜರು ದೀಕ್ಷೆ ಸ್ವೀಕರಿಸಿ, 25 ವರ್ಷ ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಅವಧಿಯಲ್ಲಿ ಅನೇಕ ಯಾತ್ರಾ ಸ್ಥಳ ಜೀರ್ಣೋದ್ಧಾರಗೊಳಿಸಿದ್ದಾರೆ. ಅನೇಕ ದೇವಾಲಯ ನಿರ್ಮಿಸಿದ್ದಾರೆ. 2016-17ರಲ್ಲಿ ಆಧ್ಯಾತ್ಮಿಕ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೃಹತ್ ದೇವಾಲಯ, ಗುರುಕುಲ, ವೃದ್ಧಾಶ್ರಮ, ಗೋಶಾಲೆ, ಉಚಿತ ಆಸ್ಪತ್ರೆ ನಿರ್ಮಾಣದಂತಹ ಜನಕಲ್ಯಾಣ ಕೆಲಸಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ’ ಎಂದು ತಿಳಿಸಿದರು.
‘ಸಮಾಜ ಸಂಘಟಿಸುವಲ್ಲಿ ಧರ್ಮ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ವ್ಯಕ್ತಿ ಮೇಲೆ ಧಾರ್ಮಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಅದು ಪರಿಣಾಮ ಬೀರುತ್ತದೆ. ಸಮಾಜದಲ್ಲಿ ಏಕತೆ ಭಾವ ಮೂಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಪರಿಸರ ಸಂರಕ್ಷಣೆ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದೂ ಕರೆಕೊಟ್ಟರು.
ಬಾಲಾಚಾರ್ಯ ಸಿದ್ಧಸೇನ ಮಹಾರಾಜರು, ದೆಹಲಿಯ ಅಹಿಂಸಾ ವಿಶ್ವ ಭಾರತಿ ಸಂಸ್ಥೆಯ ಸಂಸ್ಥಾಪಕ ಲೋಕೇಶ ಮುನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.