ಚಿಕ್ಕೋಡಿ: ತಾಲ್ಲೂಕಿನ ಕೋಥಳಿ ಗ್ರಾಮದ ದೇಶಭೂಷಣ ಆಶ್ರಮ ಜೈನರ ದಕ್ಷಿಣಕಾಶಿ ಎಂದೇ ಹೆಸರಾಗಿದೆ. ಸಮಾಧಿಸೇನ ಮುನಿ ಅವರು ಸಲ್ಲೇಖನ ವ್ರತದ ಕೈಗೊಳ್ಳುವ ಮೂಲಕ ಈ ಆಶ್ರಮ ಮತ್ತೆ ತನ್ನ ಹಿರಿಮೆ ಎತ್ತಿ ಹಿಡಿದಿದೆ. ಇದೂವರೆಗೆ 40ಕ್ಕೂ ಹೆಚ್ಚು ಜೈನ ಮುನಿಗಳು ಇಲ್ಲಿ ಯಮ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದ್ದು ಗಮನಾರ್ಹ.
‘ಮರಣವೇ ಮಹಾನವಮಿ’ ಎಂಬ ಶರಣರ ಮಾತಿಗೆ ಉದಾಹರಣೆಯಾದರು. ಸಮಾಧಿಸೇನ ಮುನಿಗಳು ಕಳೆದ 15 ವರ್ಷಗಳಿಂದ ಕೋಥಳಿಯ ದೇಶ ಭೂಷಣ ಆಶ್ರಮದಲ್ಲಿಯೇ ನೆಲಸಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಧರ್ಮ ಬೋಧನೆ ಮಾಡುತ್ತಿದ್ದರು. ನೀತಿ ಮಾರ್ಗ ತಿಳಿಸಿಕೊಡುತ್ತಿದ್ದರು. ಪ್ರತಿ ವರ್ಷ ₹50 ಸಾವಿರ ಮೊತ್ತದ ಪ್ರೋತ್ಸಾಹ ಧನವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದರು.
ಬಿ.ಎಸ್‌ಸಿ, ಬಿ.ಇಡಿ, ಎಂ.ಎ, ಎಲ್‍ಎಲ್‍ಬಿ, ಜೈನಾಲಾಜಿ ಸೇರಿದಂತೆ ಐದು ಪದವಿಗಳನ್ನು ಪಡೆದುಕೊಂಡಿದ್ದ ಅವರು, ದಶಧರ್ಮ, ಭಕ್ತಾಂಭರ ಸ್ರೋತ್ರ, ಕರ್ಮ ಸಿದ್ಧಾಂತ, ಪ್ರಾಶಾಂತ ವಾಣಿ, ಜೈನ ಧರ್ಮ ತಿಳಿಯಿರಿ ಎಂಬ ಕೃತಿಗಳನ್ನು ಕನ್ನಡ ಭಾಷೆಯಲ್ಲಿ ರಚಿಸಿದ್ದಾರೆ. ಇವರಂತೆ ಇಲ್ಲಿ ಸಲ್ಲೇಖನ ವೃತ ಕೈಗೊಂಡು ದೇಹ ತ್ಯಾಗ ಮಾಡಿದ ಬಹುತೇಕ ಜೈನ ಮುನಿಗಳು ಧರ್ಮ ಪ್ರಸಾರ, ಶಿಕ್ಷಣ ಪ್ರಸಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ ದೇಶದ ವಿವಿಧೆಡೆಯಿಂದ ಇಲ್ಲಿಗೆ ಭಕ್ತ ಸಮೂಹ ಆಗಮಿಸಿ ಕ್ಷೇತ್ರದ ದರ್ಶನ ಪಡೆದುಕೊಳ್ಳುತ್ತಾರೆ.
1968ರಲ್ಲಿ ದೇಶಭೂಷಣ ಮಹಾರಾಜರ ಪ್ರೇರಣೆಯಿಂದ ಕೋಥಳಿಯ ಆಶ್ರಮ ಸ್ಥಾಪಿತವಾಗಿದೆ. ಇದೇ ಆಶ್ರಮದಲ್ಲಿ ದೇಶ ಭೂಷಣ ಮಹಾರಾಜರು 1987ರಲ್ಲಿ ಯಮ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದರು. ಆಚಾರ್ಯ ವರದತ್ತಸಾಗರ, ಶಾಂತಿಭೂಷಣ ಮುನಿ, ಸ್ವಯಂ ಸಾಗರ ಮುನಿ, ಗುಣಭೂಷಣ ಮುನಿ, ನಿರ್ಜರಾಮತಿ ಮಾತಾಜಿ ಮುಂತಾದವರು ಇಲ್ಲಿಯೇ ಸಲ್ಲೇಖನ ವ್ರತ ಕೈಗೊಂಡಿದ್ದಾರೆ.
ಉತ್ತರ ಭಾರತದಿಂದಲೂ ಬರುತ್ತಾರೆ: ರಾಜಸ್ಥಾನ, ಗುಜರಾತ, ಮಧ್ಯಪ್ರದೇಶ ಮುಂತಾದ ಕಡೆಗಳಿಂದ ಮುನಿಗಳು ಇದೇ ಆಶ್ರಮಕ್ಕೆ ಆಗಮಿಸಿ ಆಶ್ರಮದ ಆವರಣದಲ್ಲಿ ಇರುವ ಗುಂಪಾಗಳಲ್ಲಿ ವಾಸಿಸುತ್ತಾರೆ. ಆಶ್ರಮದಲ್ಲಿ ಸನ್ಯಾಸಿ ಹಾಗೂ ಮಾತಾಜಿಗಳು ಪ್ರತ್ಯೇಕವಾಗಿ ವಾಸಿಸಲು ಇರುವ ಚಿಕ್ಕ ಚಿಕ್ಕ ಕೋಣೆಗಳೇ ಗುಂಪಾಗಳು.
30 ಎಕರೆ ಪ್ರದೇಶಗಳಲ್ಲಿರುವ ಕೋಥಳಿಯ ಆಶ್ರಮದ ಆವರಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿವೆ. 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. 200ಕ್ಕೂ ಹೆಚ್ಚು ವಿದ್ಯಾರ್ಥಿ– ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಇದೆ. 2015ರಲ್ಲಿ ಮಹಿಮಾ ಸಾಗರ ಮಹಾರಾಜರು ಆಶ್ರಮವನ್ನು ಜೀರ್ಣೋದ್ಧಾರ ಮಾಡಿದ್ದು, ಬರುವ ಜುಲೈನಲ್ಲಿ ₹10 ಕೋಟಿ ವೆಚ್ಚದಲ್ಲಿ ಆಶ್ರಮದ ಆವರಣದಲ್ಲಿ ಪಿಯು ಕಾಲೇಜು ಕಟ್ಟಡ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಲಿದೆ.
ಕೋಥಳಿಯ ದೇಶಭೂಷಣ ಆಶ್ರಮದ ಕೀರ್ತಿ ದೇಶ ಭೂಷಣ ಮಹಾರಾಜರಿಂದ ಹೆಚ್ಚಾಗಿದೆ. ಹೆಚ್ಚಿನ ಮುನಿಗಳು ಇಲ್ಲೇ ಸಲ್ಲೇಖನ ಕೈಗೊಂಡಿದ್ದು ಹೆಮ್ಮೆಯ ಸಂಗತಿ.–ಆದಿನಾಥ ಶೆಟ್ಟಿ, ಜೈನ ಸಮಾಜದ ಮುಖಂಡ
ನಮ್ಮ ತಂದೆ ಸಂಸಾರ ತ್ಯಾಗ ಮಾಡಿ 20 ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಆಗಮಿಸಿದರು. ಅವರ ಧಾರ್ಮಿಕ ನಡೆಯ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ.–ಪದ್ಮಪ್ರಸಾದ ಹೂಲಿ, ಸಮಾಧಿಸೇನ ಮುನಿ ಅವರ ಪುತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.