ಹುಕ್ಕೇರಿ: ಜೈನ ಸಮುದಾಯದ ಮುನಿಗಳ ಮತ್ತು ಸಂತರ ಹತ್ಯೆಯ ಸಮಸ್ಯೆ ಕುರಿತು ಚರ್ಚಿಸಲು ಚಿಕ್ಕೋಡಿ ತಾಲ್ಲೂಕಿನ ಶಮನೇವಾಡಿಯಲ್ಲಿ ಜ.28 ರಂದು ಬೆಳಿಗ್ಗೆ 11 ಗಂಟೆಗೆ ಸಮುದಾಯದ ಪ್ರಮುಖರ ಸಭೆ ಕರೆಯಲಾಗಿದೆ ಎಂದು ರಾಷ್ಟ್ರಸಂತ 108 ಗುಣದರ ನಂದಿ ಮಹಾರಾಜ (ವರೂರ) ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ‘15 ತಿಂಗಳೊಳಗೆ 4 ಜೈನ ಮುನಿಗಳ ಹತ್ಯೆಯಾಗಿದೆ. ಮೂರು ದಿನದ ಹಿಂದೆ ರಾಜಸ್ಥಾನದ ಪಾಲಿ ಎಂಬ ಗ್ರಾಮದಲ್ಲಿ ಟ್ರಕ್ ಮೂಲಕ ನೇರ ಆಕ್ರಮಣ ಮಾಡುವ ಘಟನೆ ನಡೆದಿದೆ. ಇವೆಲ್ಲವನ್ನು ನೋಡಿದರೆ, ಸರ್ಕಾರಗಳು ಜೈನ ಸಾಧು ಸಂತರಿಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿವೆ ಎಂದು ಅನ್ನಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಸತಿಗೆ ಸೌಲಭ್ಯ ಬೇಕು: ಜೈನ ಮುನಿಗಳು ಕಾಲುನಡುಗೆಯಲ್ಲಿ ಪಯಣ ಬೆಳೆಸುವರು. ರಾತ್ರಿ ಸಮಯದಲ್ಲಿ ಅವರಿಗೆ ತಂಗಲು ಜಾಗ ಬೇಕು. ಅದಕ್ಕಾಗಿ ಸಂಜೆ ಹೊತ್ತಿಗೆ ಯಾವ ಊರು ತಲುಪುವರೊ ಆ ಊರಿನ ಶಾಲೆಯಲ್ಲಿ ತಂಗಲು ಸ್ಥಳವಕಾಶ ಮಾಡಿಕೊಡುವಂತೆ ಸರ್ಕಾರ ಶಿಕ್ಷಣ ಇಲಾಖೆಗೆ ನಿರ್ದೇಶಿಸಬೇಕು ಎಂದು ಆಗ್ರಹಿಸಿದರು. ಕೆಲವೊಂದು ಬಾರಿ ತಂಗಲು ಜಾಗ ಸಿಗದೆ ಇದ್ದಾಗ 28 ಮುನಿಗಳು ರಸ್ತೆ ಬದಿ ಮಲಗಿದ್ದನ್ನು ಸ್ಮರಿಸಿದರು. ತಾವೂ ಸಹ ಕೆರೆ ದಂಡೆಯ ಮೇಲೆ ಮಲಗಿರುವುದಾಗಿ ಹೇಳಿ ಅಸಹಾಯಕತೆ ವ್ಯಕ್ತಪಡಿಸಿದರು.
ಜೈನ್ ನಿಗಮ/ಮಂಡಳಿ ರಚಿಸಲು ಆಗ್ರಹ: ಬೇರೆ ಸಮುದಾಯಕ್ಕೆ ಹೇಗೆ ಮಂಡಳಿ ಅಥವಾ ನಿಗಮ ರಚಿಸುವಿರೊ ಹಾಗೆಯೆ ಜೈನ ಸಮುದಾಯಕ್ಕೆ ನಿಗಮ ಅಥವಾ ಮಂಡಳಿ ರಚಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರವನ್ನು ಆಗ್ರಹಿಸಿದರು.
‘6 ತಿಂಗಳ ಹಿಂದೆ ಸರ್ಕಾರಕ್ಕೆ ಭೆಟಿಯಾಗಿ ತಮ್ಮ 4 ಬೇಡಿಕೆ ಈಡೇರಿಸುವಂತೆ ಹೇಳಿದ್ದೇವು. ಅವುಗಳಲ್ಲಿ 2 ಈಡೇರಿವೆ. ಇನ್ನೂ ಎರಡು ಬೇಡಿಕೆ ಈಡೇರಿಸಬೇಕಾಗಿದೆ ಎಂದ ಅವರು ತಮ್ಮ ಮನವಿಗೆ ಸ್ಪಂದಿಸದಿದ್ದರೆ, ಫೆ.8 ರಂದು ಉತ್ತರ ಕರ್ನಾಟಕದ ಜೈನರ ಬೃಹತ್ ಸಮಾವೇಶ ಶಮನೇವಾಡಿಯಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದರು.
ಪರೋಕ್ಷ ಎಚ್ಚರಿಕೆ: ಸರ್ಕಾರ ಜೈನರ ಅಪೇಕ್ಷೆ ಈಡೇರಿಸದಿದ್ದರೆ ಸಮುದಾಯದ ನಿರ್ಧಾರದಂತೆ ಕ್ರಮ ಕೈಗೊಳ್ಳಬೇಕಾಗುವುದು ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪುರಸಭೆ ಸದಸ್ಯ ಮಹಾವೀರ ನಿಲಜಗಿ, ಮುಖಂಡರಾದ ಸಂಜಯ ನಿಲಜಗಿ, ಪ್ರಜ್ವಲ್ ನಿಲಜಗಿ, ಸಿ.ಪಿ.ಪಾಟೀಲ್, ರೋಹಿತ್ ಚೌಗಲಾ, ಬಾಹುಬಲಿ ಸೊಲ್ಲಾಪುರ, ಅಶೋಕ ಪಾಟೀಲ್, ಮಲ್ಲಪ್ಪ ಬಿಸಿರೊಟ್ಟಿ, ಖತಗಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.