ಬೆಳಗಾವಿ: ‘ಜೈನ ಸಮಾಜವು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಹಂಚಿ ಹೋಗಿದೆ. ಈ ಎರಡೂ ದಿಕ್ಕುಗಳನ್ನು ಒಗ್ಗೂಡಿಸುವ ಸಂಗಮ ಕೇತ್ರವೆಂದರೆ ಅದು ಬೆಳಗಾವಿ. ಎಲ್ಲರೂ ಒಂದಾದಲ್ಲಿ ಸಮಾಜ ಇನ್ನೂ ಹೆಚ್ಚಿನ ಅಭಿವೃದ್ಧಿ ಪಥದಲ್ಲಿ ಸಾಗಲಿದೆ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದರು.
ನಗರದ ದಕ್ಷಿಣ ಭಾರತ ಜೈನ ಸಭೆಯ ಶಾಖೆ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್‌ನಲ್ಲಿ ನಿರ್ಮಿಸಿರುವ ಶಾಂತಿಸಾಗರ ಸ್ಮಾರಕ, ಗ್ರಂಥಾಲಯ, ಆಧ್ಯಾತ್ಮ ಕೇಂದ್ರ, ಪಾಠಶಾಲೆ ಮತ್ತು ಆಚಾರ್ಯ ಶಾಂತಿಸಾಗರ ಮುನಿ ಜೀವನಚರಿತ್ರೆ ಸಾರುವ ಫೋಟೊಗಳ ಗ್ಯಾಲರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜವು ಆಯಾ ಕ್ಷೇತ್ರದಲ್ಲಿ ತಮ್ಮದೆ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅಭಿವೃದ್ಧಿಗೂ ಶ್ರಮಿಸುತ್ತಿದೆ. ಸಮಾಜದಿಂದ ಬೆಳಗಾವಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಕೇಳಿಬರುತ್ತಿದೆ. ಇದಕ್ಕೆ ಉತ್ತರ ಭಾರತೀಯ ಜೈನ ಸಮಾಜ ಸಹಾಯ ಹಸ್ತ ಚಾಚಬೇಕು’ ಎಂದು ಕೋರಿದರು.
ವರ್ಧಮಾನ ಸಾಗರ ಮುನಿ ಸಾನ್ನಿಧ್ಯ ವಹಿಸಿದ್ದರು. ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎನ್.ಆರ್. ಪೂರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ, ಉಪಾಧ್ಯಕ್ಷ ಬಾಲಚಂದ್ರ ಪಾಟೀಲ, ದತ್ತಾ ಡೋರ್ಲೆ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ, ಉದ್ಯಮಿ ಅಶೋಕ ಪಟ್ನಿ, ರಾಜೇಂದ್ರ ಕಟಾರಿಯಾ, ಮುಖಂಡರಾದ ಡಿ.ಆರ್. ಶಹಾ, ವಿವೇಕಜಿ ಕಾಲಾ, ಜಮನಾಲಾಲ ಹಪಾವತ, ಸುಭಾಷ ಜೈನ, ಸಂಜಯ ಝವೇರಿ, ರಾಜೇಶ ಜೈನ, ವಿನೋದ ಬಾಲಕಿವಾಲ, ಅನಿಲ ಸೇಠಿ, ಬಾಪಚಂದ ಜೂಡಾವಾಲಾ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಅಧ್ಯಕ್ಷ ಕೀರ್ತಿಕುಮಾರ ಕಾಗವಾಡ ಪಾಲ್ಗೊಂಡಿದ್ದರು.
ವಿನೋದ ದೊಡ್ಡಣ್ಣವರ ಸ್ವಾಗತಿಸಿದರು. ಆರಾಧನಾ ಮಹಿಳಾ ಮಂಡಳ ಮತ್ತು ಧಾರಿಣಿ ಮಹಿಳಾ ಮಂಡಳದವರು ಪ್ರಾರ್ಥಿಸಿದರು. ರಾಕೇಶ ಸೇಠಿ ನಿರೂಪಿಸಿದರು. ಪುಷ್ಪಕ ಹನಮಣ್ಣವರ ವಂದಿಸಿದರು.
ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿ ಚಾರ್ತುಮಾಸ್ಯ ಆಚರಿಸಿದ ವರ್ಧಮಾನ ಸಾಗರ ಮುನಿ ಮತ್ತು ಅವರ ಸಂಘದ ಮುನಿಗಳು ರಾಜಸ್ಥಾನದ ಮಹಾವೀರ ಕ್ಷೇತ್ರಕ್ಕೆ ಪಾದಯಾತ್ರೆ ಆರಂಭಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.