ಬೆಳಗಾವಿ: ಪ್ರಕೃತಿಯ ಕೊರಳಿಗೆ ಮುತ್ತಿನಹಾರದಂತಿರುವ ಜಲಪಾತಗಳತ್ತ ಜನರನ್ನು ಆಕರ್ಷಿಸಲು ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ಆಯೋಜಿಸಲಾಗುವ ‘ಜಲಪಾತೋತ್ಸವ’ದಲ್ಲೂ ಉತ್ತರ ಕರ್ನಾಟಕವನ್ನು ಕಡೆಗಣಿಸಿರುವುದು, ಈ ಭಾಗದವರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ವರ್ಷ ಉತ್ತಮ ಮಳೆಯಾಗಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಜಲಪಾತಗಳು ಸೊಬಗಿನಿಂದ ಕಂಗೊಳಿಸುತ್ತಿವೆ. ಇದನ್ನು ಸಂಭ್ರಮಿಸುವುಕ್ಕಾಗಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಉತ್ಸವವನ್ನೇ ನಡೆಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲೂ ಸಾವಿರಾರು ಮಂದಿಯನ್ನು ಆಕರ್ಷಿಸುವ ಜಲಪಾತಗಳಿದ್ದರೂ ಇಲ್ಲಿ ‘ಉತ್ಸವ’ದ ಭಾಗ್ಯ ದೊರೆತಿಲ್ಲ. ಸಂಬಂಧಿಸಿದ ಇಲಾಖೆಯ ಇಲ್ಲಿನ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.
ಮೈಸೂರು ಜಿಲ್ಲೆಯ ಚುಂಚನಕಟ್ಟೆ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಹಾಗೂ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಭರಚುಕ್ಕಿ ಜಲಪಾತಗಳಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಆಯಾ ಜಿಲ್ಲಾಡಳಿತಗಳ ಸಹಯೋಗದಲ್ಲಿ ಜಲಪಾತೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತದೆ. ಈ ವರ್ಷವೂ ಇದೇ ತಿಂಗಳಲ್ಲಿ ಎರಡು ದಿನಗಳ ಕಾರ್ಯಕ್ರಮವನ್ನು ಅಲ್ಲಿ ನಡೆಸಲಾಗುತ್ತಿದೆ. ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ. ಅಲ್ಲದೇ. ಉತ್ಸವದ ನೆಪದಲ್ಲಿ ಮೂಲಸೌಲಭ್ಯ ಕಲ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಉತ್ಸವಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರವೂ ದೊರೆಯುವುದರಿಂದ, ವಿದೇಶಿ ಪ್ರವಾಸಿಗರೂ ಅಲ್ಲಿಗೆ ಬರುತ್ತಾರೆ.
ಕರ್ನಾಟಕದ ನಯಾಗರ: ಕರ್ನಾಟಕದ ನಯಾಗರ ಎಂದೇ ಪ್ರಸಿದ್ಧಿಯಾಗಿರುವ ಜಿಲ್ಲೆಯ ಗೋಕಾಕ ತಾಲ್ಲೂಕಿನ ಗೋಕಾಕ ಫಾಲ್ಸ್, ಗೊಡಚನಮಲ್ಕಿ ಜಲಪಾತಗಳಲ್ಲಿ ಉತ್ಸವ ಅಯೋಜಿಸಲು ಬಹಳಷ್ಟು ಅವಕಾಶಗಳಿವೆ. ಇವು ಧುಮ್ಮಿಕ್ಕುತ್ತಿರುವ ಸಂದರ್ಭದಲ್ಲಿ ಇಲ್ಲಿನ ಸೌಂದರ್ಯ ಕಣ್ತುಂಬಿಕೊಳ್ಳಲು ಸಾವಿರಾರು ಜನರು ಬರುತ್ತಾರೆ. ಜಿಲ್ಲೆ, ರಾಜ್ಯದ ವಿವಿಧ ಜಿಲ್ಲೆಗಳವರು ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರದಿಂದಲೂ ಪ್ರವಾಸಿಗರು ಬರುತ್ತಾರೆ. ಪಾರ್ಕಿಂಗ್, ಕುಡಿಯುವ ನೀರು, ಶೌಚಾಲಯದಂತಹ ಮೂಲಸೌಲಭ್ಯಗಳ ಕೊರತೆಗಳ ನಡುವೆಯೂ ಪ್ರವಾಸಿಗರನ್ನು ಸೆಳೆದುಕೊಳ್ಳುವಲ್ಲಿ ಈ ಜಲಪಾತಗಳು ಯಶಸ್ವಿಯಾಗಿವೆ. ಇಲ್ಲಿ ಸರ್ಕಾರ ಜಲಪಾತೋತ್ಸವ ಆಯೋಜಿಸಿದರೆ, ಆ ಭಾಗದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಬೆಳೆಸಲು ಅವಕಾಶವಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.
‘ಇದೊಂದೇ ಅಲ್ಲ, ಎಲ್ಲ ವಿಷಯದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಈ ಭಾಗದಲ್ಲಿ ಬಹಳಷ್ಟು ಜಲಪಾತಗಳು, ಪ್ರವಾಸಿ ತಾಣಗಳಿದ್ದರೂ ಅಭಿವೃದ್ಧಿಗೆ ಆದ್ಯತೆ ನೀಡುವ ಕೆಲಸ ನಡೆದಿಲ್ಲ. ಬಹಳಷ್ಟು ತಾಣಗಳು ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ಈ ತಾರತಮ್ಯ ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡ ಅಶೋಕ ಪೂಜಾರಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.