ADVERTISEMENT

ಜನಪದ ಕಲೆ ಉಳಿಸಿ ಬೆಳೆಸಬೇಕು:ಡಾ.ಚಂದ್ರಶೇಖರ ಕಂಬಾರ ಆಶಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 16:26 IST
Last Updated 24 ಡಿಸೆಂಬರ್ 2019, 16:26 IST
ಅಥಣಿಯ ಜೆ.ಇ. ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಿದರು
ಅಥಣಿಯ ಜೆ.ಇ. ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಿದರು   

ಅಥಣಿ: ‘ಕನ್ನಡ ನಾಡಿನ ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ರಸಾನುಭವವಿದೆ. ಅದನ್ನು ಉಳಿಸಿ–ಬೆಳೆಸಿ ಮುಂದಿನ ಪೀಳಿಗೆಗೆ ಕಲಿಸಿಕೊಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ’ ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಇಲ್ಲಿನ ಜೆ.ಇ. ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಜನಪದ ಸಾಹಿತ್ಯ ಮತ್ತು ನಾಟಕ ಕಲೆಯಲ್ಲಿ ನಮ್ಮ ಹಳೆಯ ನೆನಪುಗಳಿವೆ. ಆ ನೆನಪುಗಳೇ ನಮ್ಮ ಬದುಕಿಗೆ ಮಾರ್ಗದರ್ಶನವಾಗಿವೆ. ಅಹಂ ಮರೆತು ಸಮಾಜಕ್ಕಾಗಿ ವಿಶೇಷ ಸೇವೆ ಸಲ್ಲಿಸುತ್ತಾ ಬದುಕಬೇಕು ಎಂದು ತಿಳಿಸುವುದೇ ಎಲ್ಲ ಸಾಹಿತ್ಯದ ತಿರುಳಾಗಿದೆ’ ಎಂದರು.

ADVERTISEMENT

‘ದೇವರ ಸ್ವರೂಪದಲ್ಲಿರುವ ಗಿಡ ಮರಗಳನ್ನು ನಾವೆಲ್ಲರೂ ಸಂರಕ್ಷಣೆ ಮಾಡಿದಾಗ ಸಕಾಲಕ್ಕೆ ಮಳೆ, ಬೆಳೆ ಆಗುತ್ತದೆ’ ಎನ್ನುವುದನ್ನು ಕತೆಯೊಂದರ ಮೂಲಕ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಮಾತನಾಡಿ, ‘ಕನ್ನಡ ಜಪನದ ಕಲೆಗೆ ಮಹತ್ತರ ಶಕ್ತಿ ಇದೆ. ಗ್ರಾಮೀಣ ಭಾಗದಲ್ಲಿರುವ ಕಲಾವಿದರನ್ನು ಗುರುತಿಸಿ ಅವರನ್ನು ಸಂಘಟಿಸುವ ಕಾರ್ಯವನ್ನು ಜಾನಪದ ಪರಿಷತ್ತಿನ ಸದಸ್ಯರು ಮಾಡಬೇಕು. ಗಡಿನಾಡಿನಲ್ಲಿ ಜನಪದ ಕಲೆ ಮತ್ತು ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡ ಭಾಷಣಕ್ಕೆ ಸೀಮಿತವಾಗದೇ ಅದು ಉಸಿರಾಗಬೇಕು. ನಾಡಿನ ಕಲೆ, ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಅಭಿಮಾನ ಇರಬೇಕು’ ಎಂದು ಹೇಳಿದರು.

‘ಸಾಧನೆಗೆ ಭಾಷೆಗಳು ಅಡ್ಡಿಯಾಗುವುದಿಲ್ಲ. ನಾವು ಅಸಡ್ಡೆಯ ಭಾವನೆಯಿಂದ ಹೊರಬಂದು, ಕನ್ನಡ ಭಾಷೆಯಲ್ಲಿಯೇ ಓದಿ ಸಾಧನೆ ಮಾಡಿದವರ ಕುರಿತು ತಿಳಿದುಕೊಂಡು ಪ್ರೇರಣೆ ಪಡೆಯಬೇಕು’ ಎಂದು ಸಲಹೆ ನೀಡಿದರು.

ಮಕ್ಕಳ ಸಾಹಿತಿ ಅರುಣಕುಮಾರ ರಾಜಮಾನೆ ವಿರಚಿತ ‘ನಿನ್ನ ಧ್ಯಾನದಲಿ’ ಕವನಸಂಕಲನ ಬಿಡುಗಡೆ ಮಾಡಲಾಯಿತು.

ಜೆ.ಎ. ಸಂಸ್ಥೆಯ ನಿಕಟಪೂರ್ವ ಕಾರ್ಯಾಧ್ಯಕ್ಷ ಅರವಿಂದರಾವ ದೇಶಪಾಂಡೆ, ಕೇಂದ್ರ ಸಾಹಿತ್ಯ ಆಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪೂರ, ಜೆ.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ಉಕಲಿ, ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ರಾಜಮಾನೆ, ಸೃಜನಶೀಲ ಸಾಹಿತ್ಯ ಬಳಗ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಕೆ ಹೊಳೆಪ್ಪನವರ, ಕರವೇ (ಪ್ರವೀಣ ಶೆಟ್ಟಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ, ಡಾ.ಸುಹಾಸ್ ಕುಲಕರ್ಣಿ, ಅನಿಲರಾವ ದೇಶಪಾಂಡೆ, ಎನ್.ವಿ. ಕುಲಕರ್ಣಿ, ಪ್ರಾಚಾರ್ಯ ಎಚ್.ಎಸ್. ಗೌಡರ, ಶಶಧರ ಬರಲಿ, ಮಂಜುನಾಥ ಚೌಗಲಾ, ಪ್ರಿಯಂವದಾ ಅಣ್ಣೆಪ್ಪನವರ ಇದ್ದರು.

ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರಾಮಣ್ಣ ದೊಡ್ಡನಿಂಗಪ್ಪಗೋಳ ಸ್ವಾಗತಿಸಿದರು. ಎಂ.ಪಿ. ಮೇತ್ರಿ ನಿರೂಪಿಸಿದರು. ಮಲ್ಲಿಕಾರ್ಜುನ ಕಕಮರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.