ADVERTISEMENT

ನಂದಗಡದಲ್ಲಿ ಜನತಾ ದರ್ಶನ: ಅಹವಾಲು ಸಲ್ಲಿಸಿದ ಜನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 9:21 IST
Last Updated 18 ಅಕ್ಟೋಬರ್ 2023, 9:21 IST
   

ನಂದಗಡ (ಬೆಳಗಾವಿ ಜಿಲ್ಲೆ): ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಬುಧವಾರ ‘ಜನತಾ ದರ್ಶನ’ ಕಾರ್ಯಕ್ರಮ ನಡೆಯಿತು. ವಿವಿಧೆಡೆಯಿಂದ ಬಂದ ಹಲವಾರು ಜನ ತಮ್ಮ ಅಹವಾಲು ಸಲ್ಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೂಡ ನೀಡಲಾಯಿತು.

ಅನಕ್ಷರಸ್ಥ ಹಾಗೂ ಹಿರಿಯ ನಾಗರಿಕರು ಕೂಡ ಲಿಖಿತ ಅಹವಾಲು ಸಲ್ಲಿಸಲು ನೆರವಾಗಲು ಪ್ರತ್ಯೇಕ ಕೇಂದ್ರ ತೆರೆದು, ಅರ್ಜಿಗಳನ್ನು ಬರೆದುಕೊಡುವ ಮೂಲಕ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಸಿಬ್ಬಂದಿ ನೆರವು ನೀಡಿದರು. ಬೆಳಿಗ್ಗೆಯಿಂದಲೇ ಹಲವು ಜನ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

ವೇದಿಕೆ ಮೇಲಿದ್ದ ಶಾಸಕ ವಿಠ್ಠಲ ಹಲಗೇಕರ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಅಹವಾಲು ಆಲಿಸಿದರು. ಎಲ್ಲರಿಗೂ ಸ್ವೀಕೃತ ಪತ್ರ ಕೂಡ ಮರಳಿ ನೀಡಲಾಯಿತು.

ADVERTISEMENT

ಬಸ್ಸಿನಲ್ಲಿ ಪ್ರಯಾಣ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳ ತಂಡವು ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ನಂದಗಡಕ್ಕೆ ಪ್ರಯಾಣಿಸಿತು. ಬಸ್ಸಿನಲ್ಲಿಯೇ ಪ್ರಯಾಣಿಸಿ ಜನರ ಅಹವಾಲು ಆಲಿಸಲಾಯಿತು.

ಮಹಿಳಾ ಅಧಿಕಾರಿಗಳು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದರೆ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಟಿಕೆಟ್ ಪಡೆದುಕೊಂಡು ತೆರಳಿದರು.

‘ಜನತಾ ದರ್ಶನದ ಉದ್ದೇಶ ಸಫಲವಾಗಲಿ’

‘ರಸ್ತೆ, ಗಟಾರು, ವಿದ್ಯುತ್, ಕುಡಿಯುವ ನೀರು, ಆರೋಗ್ಯ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವುದು ತಾಲ್ಲೂಕುಮಟ್ಟದ ‘ಜನತಾ ದರ್ಶನ’ದ ಉದ್ದೇಶ. ಜನರು ಇದರ ಪ್ರಯೋಜನ ಪಡೆದರೆ ಮಾತ್ರ ಸಫಲವಾಗುತ್ತದೆ’ ಎಂದು ಶಾಸಕ ವಿಠ್ಠಲ ಹಲಗೇಕರ್ ಹೇಳಿದರು.

ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಬುಧವಾರ ಜಿಲ್ಲಾಧಿಕಾರಿ ‘ಜನತಾ ದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಹತ್ತು ವರ್ಷಗಳ ಬಳಿಕ ಖಾನಾಪುರ ತಾಲ್ಲೂಕಿನಲ್ಲಿ ಜನತಾದರ್ಶನ ಹಮ್ಮಿಕೊಳ್ಳಲಾಗಿದೆ. ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಿಂಗಳಿಗೊಮ್ಮೆ ಜನತಾ ದರ್ಶನ ನಡೆಸಲಾಗುತ್ತಿದೆ’ ಎಂದರು.

‘ಜನರ ಅಹವಾಲು ಸ್ವೀಕರಿಸಲು ಇಲಾಖಾವಾರು 10 ಕೌಂಟರ್ ತೆರೆಯಲಾಗಿದೆ. ಪ್ರತಿ ಅರ್ಜಿಗೆ ಸ್ವೀಕೃತಿ ನೀಡಲಾಗುತ್ತದೆ. ಅಹವಾಲು ಬಗೆಹರಿಸಲು ಕೈಗೊಳ್ಳಲಾಗುವ ಕ್ರಮಗಳ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಗ್ರಾಮ ಪಂಚಾತಿ ಅಧ್ಯಕ್ಷ ಯಲ್ಲಪ್ಪ ಗುರವ, ಉಪಾಧ್ಯಕ್ಷೆ ಸಂಗೀತಾ ಮಡ್ಡಿಮನಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ, ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಮಾಜಿ ಶಾಸಕ ಅರವಿಂದ ಪಾಟೀಲ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಆಹಾರ ಇಲಾಖೆಯ ಜ‌ಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ‌.ರಾಜೀವ್ ಕೂಲೇರ್ ಮತ್ತಿತರರು ಇದ್ದರು. ತಹಶೀಲ್ದಾರ್‌ ಪ್ರಕಾಶ್ ಗಾಯಕವಾಡ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.