ಬೈಲಹೊಂಗಲ: ಸಮೀಪದ ಮುರಗೋಡ ಗ್ರಾಮದ ಶ್ರೀಕ್ಷೇತ್ರ ಕೆಂಗೇರಿ ಮಠವು ಬ್ರಾಹ್ಮಣ ಮಠಗಳಲ್ಲಿ ಪ್ರಸಿದ್ದಿ ಪಡೆದಿರುವ ಪುಣ್ಯ ಸ್ಥಳವಾಗಿದೆ. ಮಠದ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ನೋವೆಲ್ಲ ನಿವಾರಣೆ
ಶಿವಚಿದಂಬರ ಸ್ವಾಮೀಜಿ ದರ್ಶನದಿಂದ ನೋವೆಲ್ಲ ನಿವಾರಣೆಯಾಗುತ್ತದೆ ಎನ್ನುವ ಅಪಾರ ನಂಬಿಕೆ ಭಕ್ತರಲ್ಲಿದೆ. ಅನೇಕ ಕಾಯಿಲೆಗಳಿಂದ ಬಳಲುವವರು ಮಠಕ್ಕೆ ನಡೆದುಕೊಂಡು ಗುಣಮುಖರಾಗಿದ್ದಾರೆ.
ಮಠದ ಹಿನ್ನಲೆ
ನ.20ರ 1758 ರಂದು ಚಿದಂಬರ ಸ್ವಾಮೀಜಿ ಮಾರ್ತಾಂಡ ದಿಕ್ಷೀತ್ ಹಾಗೂ ಲಕ್ಷ್ಮೀ ಮಾತೆ ಅವರ ಪುತ್ರರಾಗಿ ಜನಿಸಿದರು.
17ನೇ ಶತಮಾನದ ಅಂತ್ಯದಲ್ಲಿ ಭೀಕರ ಬರಗಾಲದಿಂದ ಜನ ತತ್ತರಿಸುತ್ತಿದ್ದ ಸಮಯದ ಆಪತ್ಕಾಲದಲ್ಲಿ ಭಕ್ತರನ್ನು ಕಾಪಾಡಿ, 12 ವರ್ಷ ಸಂಚಾರ ಮಾಡಿ ಧರ್ಮಗಳೆಲ್ಲ ಒಂದೇ ಎಂದು ಸಾರಿದರು. ಪುನಾ ಮುರಗೋಡಕ್ಕೆ ಮರಳಿ ಲೋಕ ಜಾಗೃತಿ ಕಾರ್ಯ ಮುಂದುವರಿಸಿದರು.
ಭಕ್ತರಿಗೆ ಸನ್ಮಾರ್ಗ ತೋರುವ ಸ್ವಾಮೀಜಿ
ದಾಸ ರಾಜಾರಾಮ ಹಾಗೂ ಸುಖಾರಾಮ ಗರ್ದಜೇ, ಶಿವಶಾಸ್ತ್ರಿ, ಮೀರಾಬಾಯಿ ಚಿದಂಬರ ಸ್ವಾಮೀಜಿ ಅವರ ಪ್ರಮುಖ ಭಕ್ತರಾಗಿದ್ದರು. ಪ್ರಸ್ತುತ ಈಗಿನ ಪೀಠಾಧಿಕಾರಿ ದಿವಾಕರ ದಿಕ್ಷೀತ್ ಸ್ವಾಮೀಜಿ ಕೆಂಗೇರಿ ಮಠದ ಅಭಿವೃದ್ಧಿ, ಭಕ್ತರ ಉದ್ದಾರ ಮಾಡುತ್ತ ಒಳ್ಳೆಯ ಮಾರ್ಗದಲ್ಲಿ ಮುನ್ನಡೆದಿದ್ದಾರೆ.
ಚಿದಂಬರೇಶ್ವರ ಪವಾಡಗಳು
‘ದೇಶ, ವಿದೇಶದಲ್ಲಿ ಅಪಾರ ಭಕ್ತರನ್ನು ಹೊಂದಿರುವ ಚಿದಂಬರ ಸ್ವಾಮೀಜಿ, ತಮ್ಮ ಅನೇಕ ಪವಾಡ, ಲೀಲೆಗಳನ್ನು ಮಾಡಿ ಭಕ್ತರನ್ನು ಕಾಪಾಡಿದ್ದಾರೆ. ಆ.3 ರ 1815 ರಂದು ಅವತಾರ ಸಮಾಪ್ತಿ ಮಾಡಿ ಇಂದಿಗೂ ಲಿಂಗರೂಪದಲ್ಲಿ ಭಕ್ತರನ್ನು ಆಶೀರ್ವದಿಸುತ್ತಿದ್ದಾರೆ’ ಎಂದು ಭಕ್ತ ಚಿದಂಬರ ಮೇಟಿ ತಿಳಿಸಿದರು.
ಶೈವಾಗಮೋಕ್ತ ಮಹೋತ್ಸವ ಮಠದ ಚಿದಂಬರೇಶ್ವರ ಮೂಲಪೀಠ ಮೂಲ ಮಹಾಕ್ಷೇತ್ರ ಸಂಸ್ಥಾನದ ಶಿವಚಿದಂಬರೇಶ್ವರ ಸ್ವಾಮೀಜಿ ಅವರ 265ನೇ ಅವತಾರ ಜಯಂತಿ ಶೈವಾಗಮೋಕ್ತ ಮಹೋತ್ಸವ ಡಿ.19ರ ವರೆಗೆ ಕೆಂಗೇರಿ ಮಠದ 8ನೇ ಪೀಠಾಕಾರಿ ದಿವಾಕರ ದಿಕ್ಷೀತ್ ಸ್ವಾಮೀಜಿ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಮಠದಲ್ಲಿ ಈಗಾಗಲೇ ಗರುಡ ವಾಹನೋಯ್ಸವ ಮಯೂರ ವಾಹನೋಯ್ಸವ ಹಂಸ ವಾಹನೋತ್ವ ವೃಷಭ ವಾಹನೋತ್ಸವ ನಡೆದಿದ್ದು ಡಿ. 17 ರಂದು ಮಧ್ಯಾಹ್ನ 1ಕ್ಕೆ ಅಶ್ವ ವಾಹನೋತ್ಸವ ಚಿದಂಬರ ನಾಮ ಜಪಯಜ್ಞ ರಾತ್ರಿ 8ಕ್ಕೆ ಗಜ ವಾಹನೋತ್ಸವ ಡಿ.18 ರಂದು ಮಧ್ಯಾಹ್ನ 12 ರಿಂದ ಸಂಜೆ 4 ರ ವರೆಗೆ ಚಿದಂಬರೇಶ್ವರ ಕಲ್ಯಾಣೋತ್ಸವ ರಥೋತ್ಸವ ಅಷ್ಟಾವಧಾನ ಸೇವೆ ವನಯಾತ್ರೆ ಶಯನೋತ್ಸವ ಬಲಿ ಹರಣ ಬಲಿ ಪಾಲಕಿ ಹಾಗೂ ಶೇಜಾರತಿ ಡಿ.19 ರಂದು ಮಧ್ಯಾಹ್ನ 12ಕ್ಕೆ ಬುತ್ತಿ ಪೂಜೆ ಸಂಜೆ 4ಕ್ಕೆ ಚಿದಂಬರ ಜಪಯಜ್ಞ ಪೂರ್ಣಾಹುತಿ ಅವಭ್ರತ ಸ್ನಾನ ಚಂದ್ರಮಸಿ ಸ್ವೀಕಾರ ಪೂರ್ಣಾಹುತಿ ಪೀಠಾಧಿಕಾರಿಗಳಿಂದ ಆಶೀರ್ವಚನ ಶೈವಾಗಮೋಕ್ತ ಮಹೋತ್ಸವ ಮಂಗಲ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಬ್ರಾಹ್ಮಣ ಸಂಪ್ರದಾಯವಿರುವ ಮಠಕ್ಕೆ ಪ್ರತಿನಿತ್ಯ ಅಪಾರ ಭಕ್ತರು ಭೇಟಿ ನೀಡುತ್ತಾರೆ. ಇದು ಈ ಭಾಗದ ಪ್ರಸಿದ್ಧ ಮಠಗಳಲ್ಲಿ ಒಂದು.ದಿವಾಕರ ದಿಕ್ಷೀತ್ ಸ್ವಾಮೀಜಿ, ಪೀಠಾಧಿಪತಿ, ಕಂಗೇರಿಮಠ ಮುರಗೋಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.