ADVERTISEMENT

ಕಾಗವಾಡ | ಹೆಸರಿಗಷ್ಟೇ ಹೆದ್ದಾರಿ: ಸವಾರರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 5:47 IST
Last Updated 14 ಅಕ್ಟೋಬರ್ 2024, 5:47 IST
ಕಾಗವಾಡದಿಂದ ಅಥಣಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಗುಂಡಿ
ಕಾಗವಾಡದಿಂದ ಅಥಣಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಗುಂಡಿ   

ಕಾಗವಾಡ: ಇಲ್ಲಿಂದ ಅಥಣಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಮುರಗುಂಡಿಯವರೆಗಿನ 40 ಕಿ.ಮೀ. ರಸ್ತೆ ಸಂಪೂರ್ಣ ಹದಗಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಇದು ಮೇಲ್ದರ್ಜೆಗೆ ಏರಿದ್ದರೂ, ಕಿರಿದಾಗಿರುವ ಕಾರಣ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.

ವಿಜಯಪುರದಿಂದ ಬೆಳಗಾವಿ, ಮಹಾರಾಷ್ಟ್ರದ ಮೀರಜ್‌, ಸಾಂಗ್ಲಿ, ಕೊಲ್ಹಾಪುರಕ್ಕೆ ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ವಿಶೇಷವಾಗಿ ಆಸ್ಪತ್ರೆಗೆ ತೆರಳಲು ಮತ್ತು ವ್ಯಾಪಾರಕ್ಕೆ ಹೋಗಲು ಈ ರಸ್ತೆಯೇ ಆಸರೆ. ಆದರೆ, ಹಾಳಾದ ರಸ್ತೆ ಸುಧಾರಣೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ವಹಿಸದ್ದರಿಂದ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಇಕ್ಕಟ್ಟಾದ ರಸ್ತೆಯಿಂದ ವಾಹನ ಪಕ್ಕಕ್ಕೆ ಇಳಿದರೆ, ಮತ್ತೆ ರಸ್ತೆಗೇರಲು ಹರಸಾಹಸ ಪಡಬೇಕು. ಗುಂಡಿಗಳಿಂದ ತುಂಬಿದ ರಸ್ತೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಕಾಗವಾಡ ಬಸ್ ನಿಲ್ದಾಣ, ಲೋಕೂರ, ಮಂಗಸೂಳಿ, ನವಲಿಹಾಳ ಬಳಿಯಂತೂ ರಸ್ತೆ ಹೇಳತೀರದಷ್ಟು ಕೆಟ್ಟಿದೆ.

ADVERTISEMENT

ಮಳೆಯಾದರೆ ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ನಿಲ್ಲುವ ಕಾರಣ, ಸಂಚಾರಕ್ಕೆ ತೊಡಕಾಗಿದೆ. ಈ ಮಾರ್ಗದಲ್ಲಿ ಸಂಚರಿಸುವಾಗ ಹಲವರು ನಿಯಂತ್ರಣ ತಪ್ಪಿ ಬಿದ್ದು, ಗಾಯಗೊಂಡ ಉದಾಹರಣೆಗಳೂ ಇವೆ.

ಆಮೆಗತಿಯಲ್ಲಿ ಕಾಮಗಾರಿ: ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಾರಿಗೆ ಸಚಿವ ನಿತಿನ್ ಗಡ್ಕರಿ 2021ರಲ್ಲೇ ಚಾಲನೆ ನೀಡಿದ್ದಾರೆ. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಸವಾರರಿಂದ ಆಕ್ಷೇಪ ವ್ಯಕ್ತವಾಗಿದೆ.  

‘ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಬೇಕು. ಗುಂಡಿಗಳನ್ನೆಲ್ಲ ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು’ ಎಂದು ಸವಾರರು ಒತ್ತಾಯಿಸಿದ್ದಾರೆ.

ಕಾಗವಾಡದಿಂದ ಅಥಣಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ರಸ್ತೆಯಲ್ಲಿನ ಗುಂಡಿ ಮುಚ್ಚುವ ಕೆಲಸ ಆರಂಭಿಸಿದ್ದೇವೆ. ಮಳೆಯಿಂದಾಗಿ ವಿಳಂಬವಾಗಿತ್ತು. ತ್ವರಿತವಾಗಿ ಗುಂಡಿ ಮುಚ್ಚಿ ಸವಾರರಿಗೆ ಅನುಕೂಲ ಕಲ್ಪಿಸಲಾಗುವುದು
ವಿವೇಕ ಮಠ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಜಯಪುರ
ಮಳೆಯಾದರೆ ಕಾಗವಾಡದಿಂದ ಕವಲಗುಡ್ಡ ಗ್ರಾಮದವರೆಗಿನ ರಸ್ತೆಯಲ್ಲಿ ಗುಂಡಿ ಬೀಳುತ್ತವೆ. ಸಂಚಾರಕ್ಕೆ ತೊಡಕಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು
ಕಾಕಾಸಾಬ ಪಾಟೀಲ ಸ್ಥಳೀಯ ಕಾಗವಾಡ
ಹೆಸರಿಗಷ್ಟೇ ಇದು ರಾಷ್ಟ್ರೀಯ ಹೆದ್ದಾರಿ. ಆದರೆ ಕಚ್ಚಾ ರಸ್ತೆಗಿಂತ ಕೆಟ್ಟ ಸ್ಥಿತಿಯಲ್ಲಿದೆ. ಇದರಿಂದಾಗಿ ಅಪಘಾತ ಹೆಚ್ಚುತ್ತಿವೆ
ಭರತ ಮೋಳೆ ವಕೀಲ ಕಾಗವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.