ADVERTISEMENT

ಕಳಸಾ – ಬಂಡೂರಿ ತಡೆಯಲು ಗೋವಾ ಯತ್ನ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 18:21 IST
Last Updated 6 ಜುಲೈ 2024, 18:21 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಬೆಳಗಾವಿ: ‘ಮಹದಾಯಿ ಜಲಾನಯನ ಪ್ರದೇಶಕ್ಕೆ ‘ಪ್ರವಾಹ’ ಸಂಸ್ಥೆ ಸದಸ್ಯರು ಭೇಟಿ ನೀಡುವುದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಈಗಾಗಲೇ ನಾವು ಕಾನೂನು ರೀತಿ ಮೇಲುಗೈ ಸಾಧಿಸಿದ್ದೇವೆ. ಅವರು ಬಂದು ನೋಡಿಕೊಂಡು ಹೋಗಲಿ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಳಸಾ– ಬಂಡೂರಿ ನಾಲಾ ತಿರುವು ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್‌ ಆದೇಶ ಬಂದಿದೆ. ಆದರೂ ಗೋವಾ ಸರ್ಕಾರ ಕೇಂದ್ರದ ತಂಡವನ್ನು ಆಹ್ವಾನಿಸಿದೆ. ಯೋಜನೆ ತಡೆಹಿಡಿಯಲು ಗೋವಾ ಸರ್ಕಾರ ನೆಪ ಮಾಡಿಕೊಂಡು ಬರುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲು ರಾಜ್ಯ ಸರ್ಕಾರ ಸಿದ್ಧವಾಗಬೇಕು’ ಎಂದರು.

‘ಮಹದಾಯಿ ‌ನದಿಯಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರಿನ ಹಕ್ಕೂ ಇಲ್ಲ ಎಂದು ಗೋವಾ ಸರ್ಕಾರ ಹೇಳುತಿತ್ತು. ಆದರೆ, ಈಗ ಆದೇಶ ಹೊರಬಿದ್ದು 13 ಟಿಎಂಸಿ ಅಡಿ ನೀರು ನಮ್ಮ ಪಾಲಿಗೆ ಬಂದಿದೆ. ಗೋವಾ ಮುಖ್ಯಮಂತ್ರಿ ‍ಪ್ರಮೋದ್‌ ಸಾವಂತ ಅವರು ಅಲ್ಲಿನ ಜನರನ್ನು ಮೆಚ್ಚಿಸಲು ಈ ರೀತಿ ಕೆಲಸ ಮಾಡುತ್ತಿದ್ದಾರೆ’ ಎಂದು ಶೆಟ್ಟರ್‌ ಆರೋಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.