ಬೆಳಗಾವಿ: ‘ಕನ್ನಡ ಭಾಷೆಯನ್ನು ದಿನನಿತ್ಯದ ವ್ಯವಹಾರಗಳಲ್ಲಿ ಬಳಸುವ ಮೂಲಕ ಉಳಿಸಿ– ಬೆಳೆಸಬೇಕು’ ಎಂದು ಚಲನಚಿತ್ರ ನಿರ್ದೇಶಕ, ನಟ ಪ್ರಥಮ್ ಹೇಳಿದರು.
ಇಲ್ಲಿನ ಕೆಎಲ್‌ಇ–ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಕನ್ನಡ ಬಳಗದಿಂದ ಶನಿವಾರ ಆಯೋಜಿಸಿದ್ದ ‘ಕನ್ನಡ ಹಬ್ಬ’ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
‘ಗಡಿನಾಡು ಬೆಳಗಾವಿ ಕರ್ನಾಟಕದ ರಾಜಧಾನಿ ಆಗಬೇಕು. ಉತ್ತರ, ದಕ್ಷಿಣ ಎನ್ನದೇ ಅಖಂಡ ಕರ್ನಾಟಕ ಉಳಿಯಬೇಕು; ಬೆಳೆಯಬೇಕು’ ಎಂದು ಆಶಿಸಿದರು.
‘ಗಡಿನಾಡಿನಲ್ಲಿ ಎರಡು ದಶಕಗಳಿಂದ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕನ್ನಡ ಬಳಗದ ಕಾರ್ಯ ಅಭಿನಂದನಾರ್ಹ’ ಎಂದರು.
ರೂಪದರ್ಶಿ ಶಿಲ್ಪಾ ಲದ್ದಿಮಠ ಮಾತನಾಡಿ, ‘ಕೇವಲ ಭಾಷಣಗಳಿಂದ ಕನ್ನಡ ಭಾಷೆ ಬೆಳೆಸಲು ಸಾಧ್ಯವಿಲ್ಲ. ಕನ್ನಡ ಬಳಗದಂತಹ ಸಂಘಟನೆಗಳಿಂದ ಮಾತ್ರ ಈ ಕಾರ್ಯ ಸಾಧ್ಯ’ ಎಂದು ಹೇಳಿದರು.
ಲಕ್ಷ್ಮೇಶ್ವರ ಎಂಜಿನಿಯರಿಂಗ್ ಕಾಲೇಜಿನ ಪ್ರೊ.ಎಚ್.ಕೆ. ಭಾರ್ಗವ ಮಾತನಾಡಿ, ‘ಕನ್ನಡ ರಚನಾತ್ಮಕ ಭಾಷೆ. ವಿಶೇಷ ಸೊಗಡು ಇದೆ. ಇಂಗ್ಲಿಷ್ ಭಾಷೆಯಷ್ಟೇ. ಆದರೆ, ಇಂಗ್ಲಿಷ್ ಭಾವನಾತ್ಮಕ ಭಾಷೆ’ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಮುಖ್ಯಸ್ಥ ಎಸ್.ಸಿ. ಮೆಟಗುಡ್, ಕನ್ನಡ ಬಳಗದ ಗೌರವಾಧ್ಯಕ್ಷ ಪ್ರಾಚಾರ್ಯ ಬಸವರಾಜ ಕಟಗೇರಿ ಮಾತನಾಡಿದರು.
ವೈಷ್ಣವಿ ನಾಡಗೀತೆ ಹಾಡಿದರು. ಎಚ್.ಪಿ. ರಜನಿ ಸ್ವಾಗತಿಸಿದರು. ಪ್ರೊ.ವರ್ಷಾ ಗೋಕಾಕ ಹಾಗೂ ಪ್ರೊ.ಸ್ವಾತಿ ಮಾವಿನಕಟ್ಟಿಮಠ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.