ಮಿರ್ಜಿ ಅಣ್ಣಾರಾಯ ವೇದಿಕೆ (ಕಾಗವಾಡ): ಗಡಿಯಾದ ಇಲ್ಲಿ ಕಸಾಪ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವು, ಗಡಿ ತಗಾದೆ ತೆಗೆಯುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸುವ ಜೊತೆಗೆ ಜನರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸಿ ಭಾನುವಾರ ಸಂಪನ್ನಗೊಂಡಿತು.
ಮುಂದಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿಕ್ಕೋಡಿಯಲ್ಲಿ ನಡೆಸುವ ಘೋಷಣೆ ಮಾಡಲಾಯಿತು.
ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಡಿಜಿಟಲ್ ಮಾಧ್ಯಮದ ಹಾವಳಿಯಲ್ಲಿ ಸಾಹಿತ್ಯ, ಕಲೆ, ಜಾನಪದ, ರಂಗಭೂಮಿ ನಶಿಸಿ ಹೋಗುತ್ತಿವೆ. ಮುಂದಿನ ಪೀಳಿಗೆಗೆ ತಿಳಿಸಲು ಈ ಕಲೆ ಉಳಿಯಬೇಕು. ಈ ಬಗ್ಗೆ ಸಾಹಿತ್ಯ ವಲಯ ಪ್ರಯತ್ನಿಸಬೇಕು’ ಎಂದು ಆಶಿಸಿದರು.
‘ಶೇಡಬಾಳ ಹಾಗೂ ಮಂಗಸೂಳಿಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು’ ಎಂದು ಸಲಹೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ ಯ.ರು. ಪಾಟೀಲ ಮತ್ತು ಸಾನ್ನಿಧ್ಯ ವಹಿಸಿದ್ದ ಕೃಷ್ಣಾ ಕಿತ್ತೂರಿನ ಐನಾಪುರ ಮಲ್ಲಿಕಾರ್ಜುನ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಿದ್ದರು.
ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ ಕಾರ್ಯಕ್ರಮ ನಡೆಯಿತು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ನಿರ್ಣಯಗಳನ್ನು ಮಂಡಿಸಿದಾಗ, ನೆರೆದಿದ್ದವರು ಚಪ್ಪಾಳೆ ಮೂಲಕ ಅನುಮೋದಿಸಿದರು.
ನಿರ್ಣಯಗಳು
* ಮಹಾಜನ್ ಆಯೋಗದ ವರದಿ ಜಾರಿಯಾಗಬೇಕು.
* ನಂಜುಂಡಪ್ಪ ವರದಿ ಪ್ರಕಾರ ಸಮಗ್ರ ನೀರಾವರಿ, ಮೂಲ ಸೌಕರ್ಯ, ರೈಲು ಮಾರ್ಗ, ನದಿ ನೀರು ಹಂಚಿಕೆ ಸಂಪೂರ್ಣ ಅನುಷ್ಠಾನ ಆಗಬೇಕು.
* ಕೃಷ್ಣಾ ನದಿ ಬಗ್ಗೆ 12 ವರ್ಷಗಳಿಂದ ನಿಂತಿರುವ ತೀರ್ಪು ಅನುಷ್ಠಾನವಾಗಬೇಕು.
* ಗಡಿ ಭಾಗದ ಶಾಲೆಗಳನ್ನು ಮುಚ್ಚಬಾರದು. ಅವುಗಳನ್ನು ಬಲಪಡಿಸಬೇಕು. ಇತರ ಭಾಷೆಗಳ ಶಾಲೆಗಳ ಆರಂಭಕ್ಕೆ ಅನುಮತಿ ನೀಡಬಾರದು. ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಕಟ್ಟಡಗಳನ್ನು ಅಭಿವೃದ್ಧಿಪಡಿಸಬೇಕು.
* ಗುಣಾತ್ಮಕ ಶಿಕ್ಷಣ ಕೊಡುವ ವ್ಯವಸ್ಥೆ ಆಗಬೇಕು. ಶಾಲೆಗಳಲ್ಲಿ ನೀರು, ಮೈದಾನ, ಶೌಚಾಲಯ ವ್ಯವಸ್ಥೆ ಆಗಬೇಕು.
* ಗಡಿ ಭಾಗದ ಹಳ್ಳಿಗಳಲ್ಲಿ ವಾಚನಾಲಯ ಸ್ಥಾಪಿಸಬೇಕು.
* ಸುವರ್ಣ ವಿಧಾನಸೌಧ ಸಮರ್ಪಕ ಬಳಕೆಗಾಗಿ ಮತ್ತು ಅಧಿಕಾರದ ಸಮತೋಲನಕ್ಕೆ ಮಹತ್ವದ ಇಲಾಖೆಗಳ ಕಚೇರಿಗಳನ್ನು ತಕ್ಷಣ ಸ್ಥಳಾಂತರರಿಸಬೇಕು.
* ‘ನೀಟ್’ ಬಂದಾಗಿನಿಂದ ಕನ್ನಡ ಮಾಧ್ಯಮದವರಿಗೆ ವೈದ್ಯಕೀಯ ಕೋರ್ಸ್‌ನಲ್ಲಿ ಪ್ರವೇಶ ಸಿಗುತ್ತಿಲ್ಲ. ಈ ಅನ್ಯಾಯ ಸರಿಪಡಿಸಬೇಕು. ಕನ್ನಡ ಮಾಧ್ಯಮದವರಿಗೆ ಮೀಸಲು ನೀಡಬೇಕು.
* ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ ಬದಲು ಕನ್ನಡ ಪದ ಬಳಕೆ ಆಗಬೇಕು.
* ಈಶಾನ್ಯ ಸಾರಿಗೆ ಬದಲು ‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ’, ವಾಯವ್ಯ ಸಾರಿಗೆ ಬದಲು ‘ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ’ ಎಂದಾಗಬೇಕು.
* ಸೊಲ್ಲಾಪುರ, ಜತ್ತ, ಅಕ್ಕಲಕೋಟ, ಕಾಸರಗೋಡು ಸೇರಿ ಹೊರಗುಳಿದ ಕನ್ನಡದ ಭಾಗಗಳು ಕರ್ನಾಟಕಕ್ಕೆ ಸೇರಬೇಕು.
* ವಿಧಾನಮಂಡಲ ಚಳಿಗಾಲದ ಅಧಿವೇಶನ ಸುವರ್ಣ ವಿಧಾನಸೌಧದಲ್ಲಿ ಪ್ರತಿ ವರ್ಷ ನಡೆಸಿ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು.
* ಕಾಗವಾಡದಲ್ಲಿ ಎಲ್ಲ ತರಹದ ಸರ್ಕಾರಿ ಕಚೇರಿ ಆರಂಭಿಸಬೇಕು. ಸರ್ಕಾರಿ ಪ್ರೌಢಶಾಲೆ, ಮಹಿಳಾ ಕಾಲೇಜು, ತಾಂತ್ರಿಕ ಶಿಕ್ಷಣ ಕಾಲೇಜುಗಳನ್ನು ಸ್ಥಾಪಿಸಬೇಕು. ಎಪಿಎಂಸಿ ಅಭಿವೃದ್ಧಿಪಡಿಸಬೇಕು. ಕನ್ನಡ ಭವನ ನಿರ್ಮಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.