ADVERTISEMENT

ಬೆಳಗಾವಿ | ರಾಜ್ಯೋತ್ಸವ: 5 ಗಂಟೆ ಚಿಂದಿ ಆಯ್ದು ₹20 ಸಾವಿರ ಗಳಿಸಿದರು!

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 12:59 IST
Last Updated 2 ನವೆಂಬರ್ 2023, 12:59 IST
<div class="paragraphs"><p>ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಚಿಂದಿ ಆಯುವವರು ಸಂಗ್ರಹಿಸಿದ ನೀರಿನ ಪ್ಲಾಸ್ಟಿಕ್‌ ಬಾಟಲಿಗಳನ್ನು ಪಾಲಿಕೆ ವಾಹನದಲ್ಲಿ ಸಾಗಿಸಲಾಯಿತು</p></div>

ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಚಿಂದಿ ಆಯುವವರು ಸಂಗ್ರಹಿಸಿದ ನೀರಿನ ಪ್ಲಾಸ್ಟಿಕ್‌ ಬಾಟಲಿಗಳನ್ನು ಪಾಲಿಕೆ ವಾಹನದಲ್ಲಿ ಸಾಗಿಸಲಾಯಿತು

   

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ, ಚಿಂದಿ ಆಯುವ 10 ಮಂದಿ ಐದೇ ತಾಸಿನಲ್ಲಿ ₹20 ಸಾವಿರ ಗಳಿಸಿದರು.

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬುಧವಾರ ರಾಣಿ ಚನ್ನಮ್ಮ ವೃತ್ತದಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರು. ಅವರು ನೀರು ಕುಡಿದು ಬಿಸಾಡಿದ ಪ್ಲಾಸ್ಟಿಕ್‌ ಬಾಟಲಿಗಳನ್ನು ಗುರುವಾರ 10 ಮಂದಿ ಚಿಂದಿ ಆಯುವವರು ಸಂಗ್ರಹಿಸಿದರು. ನಸುಕಿನ 3ರಿಂದ ಬೆಳಿಗ್ಗೆ 8ರವರೆಗೆ ಎರಡು ಟನ್‌ಗೂ ಅಧಿಕ ಬಾಟಲಿಗಳು ಸಂಗ್ರವಾದವು.

ADVERTISEMENT

ಪ್ರತಿ ಕೆ.ಜಿ.ಗೆ ಮಹಾನಗರ ಪಾಲಿಕೆ ₹10 ದರ ನೀಡುತ್ತದೆ. 2,000 ಕೆ.ಜಿ ಬಾಟಲಿಗಳನ್ನು ನೀಡಿ ₹20 ಸಾವಿರ ಗಳಿಸಿದರು. ಎಲ್ಲ ಹತ್ತೂ ಮಂದಿಗೆ ತಲಾ ₹2,000 ಹಂಚಿದ್ದಾಗಿ ಪಾಲಿಕೆ ಪರಿಸರ ಎಂಜಿನಿಯರ್‌ ಹಣಮಂತ ಕಲಾದಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾನಗರ ಪಾಲಿಕೆಯಿಂದ 475 ಮಂದಿಗೆ ಚಿಂದಿ ಆಯುವ ಗುರುತಿನ ಚೀಟಿ ನೀಡಲಾಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಪ್ರತಿದಿನ ಗರಿಷ್ಠ ₹200 ಗಳಿಸುತ್ತಾರೆ. ಆದರೆ, ರಾಜ್ಯೋತ್ಸವಕ್ಕೆ ಬಂದ ಜನ ಬಿಸಾಡಿದ ತ್ಯಾಜ್ಯ ಅಧಿಕ ಪ್ರಮಾಣದಲ್ಲಿತ್ತು. ವೃತ್ತದಲ್ಲಿ ನಿಯೋಜನೆ ಮಾಡಿದ ಹತ್ತೂ ಜನರಿಗೆ ನಾಡ ಹಬ್ಬದ ಕಾಣಿಗೆ ಸಿಕ್ಕಂತಾಗಿದೆ ಎಂದು ತಿಳಿಸಿದರು.

ಉಳಿದಂತೆ, 200 ಕೆ.ಜಿ ವಿವಿಧ ಬಗೆಯ ಹೂವು, 100 ಕೆ.ಜಿ.ಗೂ ಅಧಿಕ ಹರಿದ ಚಪ್ಪಲಿಗಳು, ಪ್ಲಾಸ್ಟಿಕ್‌ ಚೀಲಗಳು, ತಿಂಡಿ ತಿಂದು ಬಿಸಾಡಿದ ವ್ಯರ್ಥ ಪದಾರ್ಥಗಳು ಹೀಗೆ ಅಪಾರ ಪ್ರಮಾಣದ ತ್ಯಾಜ್ಯವನ್ನು ಪಾಲಿಕೆ ವಾಹನಗಳಲ್ಲಿ ಸಾಗಿಸಲಾಯಿತು. ಸಂಜೆಗೆ ಸ್ಕ್ರ್ಯಾಪ್‌ ವ್ಯಾಪಾರಿಗಳಿಗೆ ಮಾರಾಟ ಮಾಡಲಾಯಿತು.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರ ನಿರ್ದೇಶನದಂತೆ, ರಾಜ್ಯೋತ್ಸವ ಮೆರವಣಿಗೆ ನಡೆದ ಮಾರ್ಗಗಳಲ್ಲಿ 100 ಕೆ.ಜಿ.ಯಷ್ಟು ತ್ಯಾಜ್ಯ ಪದಾರ್ಥಗಳನ್ನು ಸಂಗ್ರಹಿಸುವ ದೊಡ್ಡ ತೊಟ್ಟಿಗಳನ್ನು ಇಡಲಾಗಿತ್ತು. ಇದರಿಂದ ಮಾಲಿನ್ಯವಾಗದಂತೆ, ತ್ಯಾಜ್ಯದಿಂದ ನಗರದ ಸೌಂದರ್ಯ ಹಾಳಾಗದಂತೆ ಕಾಪಾಡಲಾಯಿತು ಎಂದು ಅವರು ತಿಳಿಸಿದರು.

ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪಾಲಿಕೆ ಪೌರಕಾರ್ಮಿಕರು ಹರಿದ ಚಪ್ಪಲಿಗಳನ್ನು ಸಂಗ್ರಹಿಸಿದರು

ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪಾಲಿಕೆ ಪೌರಕಾರ್ಮಿಕರು ಹೂವಿನ ತಾಜ್ಯ ಸಂಗ್ರಹಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.