ADVERTISEMENT

ಬೆಳಗಾವಿ | ಮಧ್ಯರಾತ್ರಿಯೇ ಅದ್ಧೂರಿ ರಾಜ್ಯೋತ್ಸವಕ್ಕೆ ಚಾಲನೆ

ಇಮ್ಮಡಿಸಿದ‌ ಉತ್ಸಾಹ, ಒಂದು‌ ದಿನ ಮುಂಚಿತವಾಗಿಯೇ ಮೆರವಣಿಗೆ ಆರಂಭ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 20:20 IST
Last Updated 31 ಅಕ್ಟೋಬರ್ 2024, 20:20 IST
   

ಬೆಳಗಾವಿ: ಪ್ರತಿ ವರ್ಷದಂತೆ ಈ ಬಾರಿ ಕೂಡ ಕರ್ನಾಟಕ ರಾಜ್ಯೋತ್ಸವಕ್ಕೆ, ಇಲ್ಲಿ‌ನ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಮಧ್ಯರಾತ್ರಿಯೇ ಚಾಲನೆ ನೀಡಲಾಯಿತು.

ಕಿಕ್ಕಿರಿದು ಸೇರಿದ ಕನ್ನಡ ಮನಸ್ಸುಗಳು ಇನ್ನಿಲ್ಲದಂತೆ ಸಂಭ್ರಮಿಸಿದವು. ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಜೈಕಾರ, ಜಯಘೋಷಗಳು, ಸಂಭ್ರಮ ಮುಗಿಲುಮುಟ್ಟಿತು.

ನಡುರಾತ್ರಿಯೇ ಅಪಾರ ಸಂಖ್ಯೆಯ ಯುವಕ, ಯಿವತಿಯರು ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡರು. ಎಲ್ಲರ ಕೈಯಲ್ಲಿ ಹಳದಿ- ಕೆಂಪು ಬಣ್ಣದ ಕನ್ನಡ ಬಾವುಟಗಳು. ಹಳದಿ ಕೆಂಪು ಬಣ್ಣದ ಬಲೂನುಗಳ ಹಾರಾಟ. ನಾಡು- ನುಡಿಯ ನೆಚ್ಚಿನ ಗೀತೆಗಳ ಸಂಭ್ರಮ ಮನೆ ಮಾಡಿತು.

ADVERTISEMENT

ಮಧ್ಯರಾತ್ರಿ 12ಕ್ಕೆ ಕೇಕ್ ಕತ್ತರಿಸಿ, ರಾಜ್ಯೋತ್ಸವ ಆಚರಣೆಗೆ ಚಾಲನೆ ಕೊಡಲಾಯಿತು. ಜನ ಸಿಡಿಮದ್ದು, ಪಟಾಕಿಗಳನ್ನು ಹಾರಿಸಿ ಸಂಭ್ರಮಿಸಿದರು. ಎಲ್ಲರೂ ಮೊಬೈಲ್ ಟಾರ್ಚ್ ಬೆಳಗಿಸಿ ಕನ್ನಡ ಹಬ್ಬಕ್ಕೆ ಶುಭ ಕೋರಿದರು. ಝಗಮಗಿಸುವ ವಿದ್ಯುದ್ದೀಪಗಳ ಮಧ್ಯೆ, ಹೂವಿನ ಅಲಂಕಾರ, ಕನ್ನಡ ಪಟಗಳ ಸಿಂಗಾರ, ವರ್ಣರಂಜಿತ ಸ್ಚಾಗತ ಕಮಾನುಗಳ ಮಧ್ಯೆ, ಲಾರಿಯಲ್ಲಿ ಹೇರಿಕೊಂಡು ಬಂದ ಬೃಹತ್ ಸಂಗೀತ ಪರಿಕರಗಳು, ಲೇಸರ್ ಬೆಳಕಿನ ನರ್ತನ... ಎಲ್ಲವೂ ಸೇರಿ ವೈಭವೋಪೇತ ಮೆರವಣಿಗೆಗೆ ಚಾಲನೆ ದೊರೆಯಿತು.

ಇನ್ನಿಲ್ಲದ ಉತ್ಸಾಹದಿಂದ‌ ಸೇರಿದ ಕನ್ನಡಿಗರು ಹಾಡು, ಸಂಗೀತಕ್ಕೆ ಕುಣಿದು‌ ಕುಪ್ಪಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.