ಬೆಳಗಾವಿ: ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದು, ರಕ್ತ ಸುರಿಸಿದವರನ್ನು ಸರ್ಕಾರ ಮರೆತಿದೆ. ಗಡಿಯಲ್ಲಿ ಕನ್ನಡ ಭಾಷೆಯ ಅಸ್ತಿತ್ವಕ್ಕಾಗಿ ಅವರು ಮಾಡಿಕೊಂಡ ಗಾಯದ ಕಲೆಗಳು ಇನ್ನೂ ಮಾಸಿಲ್ಲ.
ಹೋರಾಟಗಾರರಾದ ಬಸವರಾಜ ಢವಳಿ, ಶಂಕರ ಹುಲಮನಿ, ಮಲ್ಲಣ್ಣ ಢವಳಿ, ಗೋವಿಂದ ಟೊಪಗಿ, ಶ್ರೀಕಾಂತ ಕೊಳದೂರ, ಮಲ್ಲಪ್ಪ ಶಿಂಗಾರಿ (ನಿಧನ) ಅವರೇ ಕನ್ನಡಕ್ಕಾಗಿ ಮೊಣಕಾಲು ಸವೆಸಿದವರು.
1981ರಲ್ಲಿ ಗೋಕಾಕ ವರದಿ ಜಾರಿಗಾಗಿ ಆಂದೋಲನ ಜೋರಾಗಿತ್ತು. ಆಗ ಬೆಳಗಾವಿ ಆರು ಯುವಕರು ತಮ್ಮ ಮೊಣಕಾಲುಗಳ ಮೇಲೆ 2 ಕಿ.ಮೀ ದೂರ ನಡೆದು ವಿನೂತನ ಹೋರಾಟ ಮಾಡಿದರು. ಗಡಿನಾಡ ಯುವಕರ ಆ ಧೈರ್ಯ, ಉತ್ಕಟ ಕನ್ನಡಾಭಿಮಾನ ಚಳವಳಿಗೆ ಹೊಸ ದಿಕ್ಕು ನೀಡಿತ್ತು.
ಯುವಕರ ಮೊಣಕಾಲುಗಳು ಒಡೆದು, ರಕ್ತಸ್ರಾವವಾಗಿ, ಕಾಳುಬೆರಳ ಉಗುರುಗಳು ಕಿತ್ತುಬಂದವು, ಎರಡು ತಿಂಗಳು ಆಸ್ಪತ್ರೆ ಸೇರಿದ್ದರು. ಆದರೆ, ಜಿಲ್ಲಾಡಳಿತ ಅವರನ್ನು ನೆನಸಿಕೊಳ್ಳುವ ಗೋಜಿಗೂ ಹೋಗಿಲ್ಲ. ನಾಲ್ಕು ದಶಕಗಳ ನಂತರವೂ ಅವರಿಗೆ ಕನಿಷ್ಠ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿಲ್ಲ.
‘36 ಗೆಳೆಯರು ಕನ್ನಡ ತರುಣ ಸಂಘ ಕಟ್ಟಿಕೊಂಡಿದ್ದೇವು. ವಡಗಾವಿ, ಖಾಸಬಾಗ ಕೇಂದ್ರವಾಗಿ ಹೋರಾಟ ಶುರು ಮಾಡಿದ್ದೇವು. ಜನಪ್ರತಿನಿಧಿಗಳ ಮನೆ ಮುಂದೆ ಬೊಬ್ಬೆ ಹಾಕುವುದು, ಉರುಳುಸೇವೆ, ಹರತಾಳ್ ನಡೆದೇ ಇದ್ದವು. ಸರ್ಕಾರ ಕಣ್ಣು ತೆರೆಯಲಿಲ್ಲ. ಆಗ ಮೊಣಕಾಲುಗಳ ಮೇಲೆ ನಡೆದು ಹೊಸ ಸಾಹಸ ಮಾಡಲು ಮುಂದಾದೆವು. ನಗರದ ಬೋಗಾರ್‌ವೇಸ್ ಸ್ಥಳದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಆರೂ ಜನ ಮೊಣಕಾಲುಗಳ ಮೇಲೆ ನಡೆದುಹೋದವು. ಸುತ್ತ ಸೇರಿದ ಜನ ಜೈಕಾರ ಹಾಕುತ್ತಲೇ ಇದ್ದರು. ರಕ್ತ ಸುರಿಯುತ್ತಿತ್ತು. ಕಾಲುಗಳು ಮರಗಟ್ಟಿದ್ದವು. ಕನ್ನಡತನದ ಹುಮ್ಮಸ್ಸಿನಲ್ಲಿ ಏನೂ ಅನ್ನಿಸಲಿಲ್ಲ. ಆ ಪ್ರಯೋಗದಿಂದ ಹೋರಾಟದ ಸ್ವರೂಪವೇ ಬದಲಾಯಿತು’ ಎಂದು ತಮ್ಮ ದಿನಗಳನ್ನು ನೆನೆದರು ಬಸವರಾಜ ಢವಳಿ.
‘ಮಾರನೇ ದಿನ ಚಿತ್ರನಟರಾದ ಡಾ.ರಾಜಕುಮಾರ್, ಅನಂತನಾಗ್, ಲೋಕೇಶ್, ಅಶೋಕ್ ಮುಂತಾದವರು ಬೆಳಗಾವಿಗೆ ಬಂದರು. ರಾಜಕುಮಾರ್ ಖುದ್ದಾಗಿ ನಮ್ಮೆಲ್ಲರನ್ನು ಭೇಟಿಯಾದರು. ತಮ್ಮ ಭಾಷಣದಲ್ಲೂ ನಮ್ಮ ಹೋರಾಟ ಬೆಂಬಲಿಸಿದರು. ಅಂದು ಮೊಣಕಾಲುಗಳು ಗಾಯವಾಗಿದ್ದವು. ಮುಖದಲ್ಲಿ ನಗು ಇತ್ತು’ ಎಂದರು.
‘ಈಗ ಎಲ್ಲರೂ ಹಿರಿಯ ನಾಗರಿಕರಾಗಿದ್ದೇವೆ. ಬೆಳಗಾವಿಯ ರಾಜ್ಯೋತ್ಸವ ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದೆ. ಹೊಸ ನೀರು ಬಂದಿದೆ. ಕಾಲಗರ್ಭದಲ್ಲಿ ನಾವು ಕಳೆದುಹೋದೆವು. ಆದರೆ, ನೋವಿಲ್ಲ. ಪ್ರಶಸ್ತಿ ಕೊಡಲಿಲ್ಲ ಎಂಬ ತಕರಾರು ಇಲ್ಲ. ಪ್ರತಿ ವರ್ಷ ನಮ್ಮ ಫೋಟೊಗಳನ್ನು ನಾವೇ ನೋಡಿ ಖುಷಿಪಡುತ್ತೇವೆ’ ಎಂದರು ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.