ADVERTISEMENT

ದೀಪಾವಳಿ ಕಾರಣಕ್ಕೆ ನವೆಂಬರ್‌ 1ರಂದು ರಾಜ್ಯೋತ್ಸವ ಮೆರವಣಿಗೆ ಆಯೋಜನೆಗೆ ಪರ–ವಿರೋಧ

ಮೆರವಣಿಗೆ: ಜಿಲ್ಲಾಧಿಕಾರಿ ಭೇಟಿಗೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 17:17 IST
Last Updated 4 ಅಕ್ಟೋಬರ್ 2024, 17:17 IST
<div class="paragraphs"><p>ಬೆಳಗಾವಿಯ ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ಶುಕ್ರವಾರ ನಡೆದ ಕನ್ನಡ ಸಂಘಟನೆಗಳ ಸಭೆಯಲ್ಲಿ ದೀಪಕ ಗುಡಗನಟ್ಟಿ ಮಾತನಾಡಿದರು</p></div>

ಬೆಳಗಾವಿಯ ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ಶುಕ್ರವಾರ ನಡೆದ ಕನ್ನಡ ಸಂಘಟನೆಗಳ ಸಭೆಯಲ್ಲಿ ದೀಪಕ ಗುಡಗನಟ್ಟಿ ಮಾತನಾಡಿದರು

   

ಬೆಳಗಾವಿ: ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಆಯೋಜನೆ ದಿನಾಂಕ ಅಂತಿಮಗೊಳಿಸುವ ವಿಚಾರವಾಗಿ, ಶನಿವಾರ ಜಿಲ್ಲಾಧಿಕಾರಿ ಭೇಟಿಯಾಗಿ ಚರ್ಚಿಸುವ ತೀರ್ಮಾನವನ್ನು ಇಲ್ಲಿ ಶುಕ್ರವಾರ ನಡೆದ ಕನ್ನಡ ಸಂಘಟನೆಗಳ ಸಭೆಯಲ್ಲಿ ಕೈಗೊಳ್ಳಲಾಯಿತು.

ADVERTISEMENT

ಪ್ರತಿವರ್ಷ ನವೆಂಬರ್‌ 1ರಂದು ಬೆಳಗಾವಿಯಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ ನಡೆಯುತ್ತದೆ. ಈ ಬಾರಿ ನ.1ರಂದೇ ದೀಪಾವಳಿ ಹಬ್ಬವೂ ಇರುವ ಕಾರಣ, ರಾಜ್ಯೋತ್ಸವದ ಮೆರವಣಿಗೆ ಮುಂದೂಡಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಸಂಪ್ರದಾಯದಂತೆ ನವೆಂಬರ್‌ 1ರಂದೇ ಮೆರವಣಿಗೆ ಮಾಡಬೇಕು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಈ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ಗಡಿ ಕನ್ನಡಿಗರ ಪಾಲಿಗೆ ರಾಜ್ಯೋತ್ಸವವೇ ದೀಪಾವಳಿ ಇದ್ದಂತೆ. ಅಂದು ಕನ್ನಡಿಗರಲ್ಲಿ ಹೆಚ್ಚಿನ ಉತ್ಸಾಹವಿರುತ್ತದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಕನ್ನಡಿಗರೂ ಸೇರುತ್ತಾರೆ. ಹಲವು ವರ್ಷಗಳಿಂದ ಅಂದೇ ಮೆರವಣಿಗೆ ಮಾಡುತ್ತ ಬಂದಿದ್ದೇವೆ. ಈ ಸಂಪ್ರದಾಯ ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯೋತ್ಸವದ ಮೆರವಣಿಗೆ ಯಶಸ್ವಿಯಾಗಲು ಜಿಲ್ಲಾಡಳಿತ ಮತ್ತು ಪೊಲೀಸರ ಸಹಕಾರವೂ ಬೇಕು. ಅವರ ಜತೆಗೂ ಚರ್ಚಿಸೋಣ. ಮೆರವಣಿಗೆ ದಿನಾಂಕ ಮುಂದೂಡುವ ಬದಲಿಗೆ, ನ.1ರಂದು ಮೆರವಣಿಗೆ ಸಮಯ ವಿಸ್ತರಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸೋಣ’ ಎಂದರು.

ಮುಖಂಡ ಶ್ರೀನಿವಾಸ ತಾಳೂಕರ, ‘ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಯನ್ನು ಯಾವ ಕಾರಣಕ್ಕೂ ಮುಂದಕ್ಕೆ ಹಾಕಬಾರದು’ ಎಂದು ತಿಳಿಸಿದರು.

‘ಇಡೀ ರಾಜ್ಯದಲ್ಲಿ ಸಡಗರದ ರಾಜ್ಯೋತ್ಸವದ ಮೆರವಣಿಗೆ ನಡೆಯುವುದೇ ಬೆಳಗಾವಿಯಲ್ಲಿ. ದೀಪಾವಳಿ ಕಾರಣಕ್ಕೆ ಹೆಚ್ಚಿನ ಜನ ಸೇರದಿರಬಹುದು. ವಿವಿಧೆಡೆಯಿಂದ ಮೆರವಣಿಗೆ ವೀಕ್ಷಣೆಗೆ ಬರುವವರಿಗೂ ತೊಂದರೆ ಆಗಬಹುದು. ಹಾಗಾಗಿ ನ.3ಕ್ಕೆ ಮುಂದೂಡಿ’ ಎಂದು ಕೆಲವರು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ಅ.5ರಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರನ್ನು ಭೇಟಿಯಾಗಿ, ಸಾಧಕ–ಬಾಧಕ ಅಂಶಗಳ ಕುರಿತು ವಿಸ್ತೃತವಾಗಿ ಚರ್ಚಿಸೋಣ. ನಂತರ ಅಂತಿಮ ತೀರ್ಮಾನಕ್ಕೆ ಬರೋಣ’ ಎಂದು ತಿಳಿಸಿದರು.

ಮುಖಂಡರಾದ ಗಣೇಶ ರೋಕಡೆ, ಶಿವು ದೇವರವರ, ವಾಜೀದ್‌ ಹಿರೇಕೋಡಿ, ಬಾಬು ಸಂಗೋಡಿ, ಕಸ್ತೂರಿ ಭಾವಿ, ಬೀರಾ ಅನಗೋಳಕರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.