ಬೆಳಗಾವಿ: ಅಖಂಡ ಜಿಲ್ಲೆ ಸೇರಿ ಈ ಬಾರಿ ಒಟ್ಟು 10,175 ವಿದ್ಯಾರ್ಥಿಗಳು ಫೇಲಾಗಿದ್ದಾರೆ!
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 4,742 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಅತಿ ಹೆಚ್ಚು ಮಕ್ಕಳು ಅಂದರೆ; 2,490 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಿಂದ 1,352 ಹಾಗೂ ವಿಜ್ಞಾನ ವಿಭಾಗದಲ್ಲಿ 900 ಫೇಲಾಗಿದ್ದಾರೆ.
ಅದೇ ರೀತಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 5,433 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 3,606, ವಾಣಿಜ್ಯ ವಿಭಾಗದಲ್ಲಿ 927 ಹಾಗೂ ವಿಜ್ಞಾನ ವಿಭಾಗದಲ್ಲಿ 900 ಮಕ್ಕಳು ಫೇಲಾಗಿದ್ದಾರೆ.
’ಕಬ್ಬಿಣದ ಕಡಲೆ‘ ಎಂದು ಹೇಳುವ ವಿಜ್ಞಾನ ವಿಭಾಗದಲ್ಲೇ ಫೇಲಾದವರು ಕಡಿಮೆ. ‘ಸುಲಿದ ಬಾಳೆ ಹಣ್ಣು’ ಎಂದು ಪರಿಗಣಿಸುವ ಕಲಾ ವಿಭಾಗದಲ್ಲೇ ಅತಿ ಹೆಚ್ಚು ಮಕ್ಕಳು ಫೇಲಾಗಿದ್ದು ಅಚ್ಚರಿಕೆ ಕಾರಣವಾಗಿದೆ.
ಈ ಬಾರಿ ದ್ವಿತೀಯ ಪಿಯು ಫಲಿತಾಂಶದಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಎರಡು ಸ್ಥಾನ ಹಿಂದಕ್ಕೆ ಬಿದ್ದಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಒಂದು ಸ್ಥಾನ ಮಾತ್ರ ಮೇಲಕ್ಕೆ ಬಂದಿದೆ. ಎರಡೂ ಜಿಲ್ಲೆಗಳ ಶೈಕ್ಷಣಿಕ ಸಾಧನೆ ಅಷ್ಟೇನು ಸುಧಾರಣೆ ಕಂಡಿಲ್ಲ.
ಕಳೆದ ಬಾರಿಯ ರಾಜ್ಯಕ್ಕೆ 25ನೇ ಸ್ಥಾನ ಪಡೆದಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಈ ಬಾರಿ 27ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ 16ನೇ ಸ್ಥಾನದಲ್ಲಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಈ ಬಾರಿ 15ನೇ ಸ್ಥಾನಕ್ಕೆ ಏರಿದೆ.
ಕಲಾ ವಿಭಾಗದಲ್ಲಿ ಒಟ್ಟು 7,433 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು 4,943 ಮಕ್ಕಳು ಮಾತ್ರ ಪಾಸಾಗಿದ್ದಾರೆ. 2,490 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಒಟ್ಟಾರೆ ಫಲಿತಾಂಶ ಶೇ 66.5ಕ್ಕೆ ಕುಸಿದಿದೆ.
ವಾಣಿಜ್ಯ ವಿಭಾಗದಿಂದ 6,301 ಮಕ್ಕಳು ಪರೀಕ್ಷೆ ಬರೆದಿದ್ದು 4,949 ಮಂದಿ ಪಾಸಾಗಿದ್ದಾರೆ. 1,352 ಮಕ್ಕಳು ಫೇಲಾಗಿದ್ದಾರೆ. ಶೇ 78.54 ಫಲಿತಾಂಶ ಸಿಕ್ಕಿದೆ.
ವಿಜ್ಞಾನ ವಿಭಾಗದಲ್ಲಿ 7,061 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 6,161 ಮಂದಿ ಪಾಸಾಗಿದ್ದಾರೆ. 900 ಅನುತ್ತೀರ್ಣಗೊಂಡಿದ್ದಾರೆ. ಶೇ 87.25ರಷ್ಟು ಫಲಿತಾಂಶ ಸಿಕ್ಕಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಡಿಡಿಪಿಯು ಎಂ.ಎಂ.ಕಾಂಬಳೆ, ‘ಈ ಬಾರಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕಳೆದಬಾರಿಗಿಂತ ಏಕೆ ಕಡಿಮೆ ಆಗಿದೆ ಎಂಬುದು ಗೊತ್ತಾಗಿಲ್ಲ. ನಾಳೆಯೇ ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದಿದ್ದೇನೆ. ಕೂಲಂಕಶವಾಗಿ ಚರ್ಚಿಸಿ ಮಾಹಿತಿ ಪಡೆಯುತ್ತೇನೆ. ಮುಂದಿನ ಬಾರಿ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ’ ಎಂದರು.
‘ಜಿಲ್ಲೆಯಲ್ಲಿ ಶಿಕ್ಷಕರು, ಉಪನ್ಯಾಸಕರ ಕೊರತೇ ಏನೂ ಇಲ್ಲ. ಮುಂಜಾಗ್ರತೆಯಿಂದ ವಿವಿಧ ಶೈಕ್ಷಣಿಕ ಕಾರ್ಯಕ್ರಮ ಹಾಕಿಕೊಂಡಿದ್ದೇವು. ಶಿಕ್ಷಕರಿಗೆ ಕಾರ್ಯಾಗಾರ, ಮಕ್ಕಳಿಗೆ ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವ ರೂಢಿ, ರಿವಿಜನ್, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚೆ... ಹೀಗೆ ಫಲಿತಾಂಶ ಸುಧಾರಣೆಗೆ ವಿವಿಧ ಆಯಾಮಗಳನ್ನು ಪ್ರಯತ್ನ ಮಾಡಲಾಗಿದೆ. ಜಿಲ್ಲೆಗೆ 27ನೇ ಸ್ಥಾನ ಸಿಕ್ಕಿದ್ದರೂ ಮಕ್ಕಳ ಫಲಿತಾಂಶದಲ್ಲಿ ಸಾಕಷ್ಟು ಪ್ರಗತಿ ಕಂಡಿದೆ’ ಎಂದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ 82.03ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ರಾಜ್ಯದಲ್ಲಿ 15ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಒಟ್ಟು 30,228 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 24,795 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ 14,638 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11,032 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 6,763 ವಿದ್ಯಾರ್ಥಿಗಳ ಪೈಕಿ 5,836 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 8,827 ವಿದ್ಯಾರ್ಥಿಗಳಲ್ಲಿ 7,927 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ನಗರ ಪ್ರದೇಶದಲ್ಲಿ 15,546 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 12,065 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 14,682 ವಿದ್ಯಾರ್ಥಿಗಳಲ್ಲಿ 12,730 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಚಿಕ್ಕೋಡಿ ಡಿಡಿಪಿಯು ಪಾಂಡುರಂಗ ಭಂಡಾರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.