ಕಾಗವಾಡ: ಖಿಳೇಗಾಂವ ಬಸವೇಶ್ವರ ಏತನೀರಾವರಿ ಯೋಜನೆಯೇ ಕಾಗವಾಡ ವಿಧಾನಸಭಾ ಕ್ಷೇತ್ರದ ಈ ಬಾರಿಯ ಚುನಾವಣೆಯ ಕೇಂದ್ರ ವಸ್ತು. ಕ್ಷೇತ್ರದ ಉತ್ತರ ಭಾಗಕ್ಕೆ ನೀರು ಪೂರೈಸುವ ಈ ಬೃಹತ್ ಯೋಜನೆ ಮಾಡಿದ್ದು ಯಾರು ಎಂಬುದರ ಬಗ್ಗೆ ಕಾಂಗ್ರೆಸ್– ಬಿಜೆಪಿಯಲ್ಲಿ ಹಗ್ಗಜಗ್ಗಾಟ ನಡೆದಿದೆ. ಕಣ್ಣಿಗೆ ಕಾಣುವಂಥ ಈ ಅಭಿವೃದ್ಧಿಯನ್ನು ಮುಂದಿಟ್ಟುಗೊಂಡೇ ಉಭಯ ಪಕ್ಷಗಳು ಸೆಣಸಲು ಸಜ್ಜಾಗಿವೆ.
2917ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ರಾಜು ಕಾಗೆ ಅವರು ಈ ಯೋಜನೆ ಮಂಜೂರು ಮಾಡಿಸಿದ್ದರು. ಆಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನು ಕರೆತಂದು ಭೂಮಿಪೂಜೆ ಮಾಡಿಸಿದ್ದರು. ಹೀಗಾಗಿ, ಅದು ತಮ್ಮದೇ ಯೋಜನೆ ಎನ್ನುವುದು ಭರಮಗೌಡ (ರಾಜು) ಕಾಗೆ ಅವರ ವಾದ.
2018ರಿಂದ ಇಲ್ಲಿಯವರೆಗೆ ಅತಿ ಹೆಚ್ಚು ಅನುದಾನ ತಾವೇ ತಂದಿದ್ದು, ಯೋಜನೆ ಪೂರ್ಣಗೊಳಿಸಿದ್ದೇನೆ. ಹಾಗಾಗಿ, ಯೋಜನೆ ಶ್ರೇಯ ತಮಗೇ ಸಲ್ಲಬೇಕು ಎನ್ನುವುದು ಶ್ರೀಮಂತ ಅವರ ಮಾತು.
ಹಳೆ ದಿನಗಳ ಮೆಲುಕು: ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದ್ದು ಕಾಗವಾಡ ವಿಧಾನಸಭಾ ಕ್ಷೇತ್ರ. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದವರು 2019ರಲ್ಲಿ ಬಿಜೆಪಿಗೆ ಹೋಗಿದ್ದರು, ಬಿಜೆಪಿಯಲ್ಲಿದ್ದವರು ಕಾಂಗ್ರೆಸ್ ಸೇರಿದ್ದರು. ಅಭ್ಯರ್ಥಿಗಳು ಈ ವಿನಿಮಯ ಇಡೀ ಕ್ಷೇತ್ರದ ಮತದಾರರಿಗೆ ‘ಸರ್ಪರೈಸ್’ ಆಗಿತ್ತು.
ಕಳೆದುಹೋದ ದಿನಗಳನ್ನು ಮೆಲುಕು ಹಾಕಿಕೊಂಡೇ ಪ್ರಸಕ್ತ ಚುನಾವಣೆಯಲ್ಲಿ ಮತ ಕೇಳುವ ಅನಿವಾರ್ಯ ಎರಡೂ ಪಕ್ಷಗಳಲ್ಲಿ ಇದೆ.
ಹಾಲಿ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಮತ್ತೊಮ್ಮೆ ಬಿಜೆಪಿ ಟಿಕೆಟ್ ಸಿಗುವುದು ಖಾತ್ರಿಯಾಗಿದೆ. ಹೇಗಾದರೂ ಮಾಡಿ ಖಿಳೇಗಾಂವ ಏತನೀರಾವರಿ ನೀರು ಹರಿಸಿಯೇ ಚುನಾವಣೆಗೆ ಹೋಗಬೇಕು ಎಂಬ ಹಟ ತೊಟ್ಟಿದ್ದರು ಶಾಸಕ. ಆದರೆ, ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಸಾಧ್ಯವಾಗಲಿಲ್ಲ. ಅಂತಿಮ ಹಂತಕ್ಕೆ ಬಂದ ಸಂಗತಿಯನ್ನೇ ಅವರು ಮತದಾರರ ಮುಂದೆ ಇಡುತ್ತಿದ್ದಾರೆ. ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದೂ ಅವರಿಗೆ ರೈತರ ಮತ ಸೆಳೆಯಲು ಅನುಕೂಲವಾಗಲಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು.
ಕೋವಿಡ್ ಸಂದರ್ಭದಲ್ಲಿ ಶ್ರೀಮಂತ ಪಾಟೀಲ ಫೌಂಡೇಷನ್ ಮೂಲಕ ಜನ ಹಾಗೂ ಜಾನುವಾರುಗಳಿಗೆ ಅವರು ನೀಡಿದ ಸಹಾಯ ಕೂಡ ನಿರ್ಲಕ್ಷ್ಯ ಮಾಡುವಂಥ ಸಂಗತಿಯಲ್ಲ.
ಅಲ್ಲದೇ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಖೋಕಲೆ ಹಾಗೂ ಆರ್‌ಎಸ್‌ಎಸ್ ಮುಖಂಡ, ವೈದ್ಯರಾದ ಡಾ.ಅಮೂಲ್ ಸರಡೆ ಕೂಡ ಟಿಕೆಟ್‌ಗೆ ಯತ್ನ ಮುಂದುವರಿಸಿದ್ದಾರೆ.
ಕಾಂಗ್ರೆಸ್‌ನಿಂದ ಈಗಾಗಲೇ ರಾಜು ಕಾಗೆ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ನಾಲ್ಕು ಬಾರಿ ಕಾಗವಾಡ ಕ್ಷೇತ್ರದ ಶಾಸಕರಾದ ರಾಜು ಕಾಗೆ ಅನುಭವಿ ರಾಜಕಾರಣಿ. ಅವರು ನಾಲ್ಕೂ ಬಾರಿ ಬಿಜೆಪಿಯಿಂದಲೇ ಶಾಸಕರಾಗಿದ್ದು ವಿಶೇಷ. ಆದರೆ, 2018 ಹಾಗೂ 2019ರ ಉಪ ಚುನಾವಣೆಯಲ್ಲಿ ಅವರು ಸೋಲುಂಡರು.
ಶ್ರೀಮಂತ ಪಾಟೀಲ ವಿರುದ್ಧ ಸಮರ್ಥ ಅಭ್ಯರ್ಥಿ ಎಂದು ರಾಜು ಅವರಿಗೆ ಟಿಕೆಟ್ ನೀಡಲಾಗಿದೆ. ಮೇಲಾಗಿ, ಶ್ರೀಮಂತ ಪಾಟೀಲ ಅವರು ಮರಾಠ ಸಮುದಾಯದವರು. ರಾಜು ಕಾಗೆ ಲಿಂಗಾಯತರು. ಕ್ಷೇತ್ರದಲ್ಲಿರುವ ಲಿಂಗಾಯತ ಮತಗಳು, ಸಿದ್ದರಾಮಯ್ಯ ಅವರ ಬೆಂಬಲಿತ ಕುರುಬ ಸಮಾಜ ಹಾಗೂ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಸೇರಿದರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು.
ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್ ಅರುಣ ಯಲಗುದ್ರಿ, ದೇಸಾಯಿ ಮನೆತನದವರಾದ ದಿಗ್ವಿಜಯ ಪವಾರ ದೇಸಾಯಿ ಕೂಡ ಕಾಂಗ್ರೆಸ್‌ನ ಆಕಾಂಕ್ಷಿಗಳಾಗಿದ್ದರು. ರಾಜು ಅವರಿಗೆ ಟಿಕಟ್ ಸಿಕ್ಕ ನಂತರ ಬಂಡಾಯ ಏಳುವ ಯಾವುದೇ ವಿಚಾರ ಕ್ಷೇತ್ರದಲ್ಲಿ ಕೇಳಿಬಂದಿಲ್ಲ.
ಆಮ್ ಆದ್ಮಿ ಪಕ್ಷದಿಂದ ಕಲ್ಲಪ್ಪ ಮಗದುಮ್ ಹಾಗೂ ಜೆಡಿಎಸ್‌ನಿಂದ ಮಲ್ಲಿಕಾರ್ಜುನ ಗುಂಜಿಗಾಂವಿ ಟಿಕೆಟ್‌ಗಾಗಿ ಸಿದ್ಧತೆ ನಡೆಸಿದ್ದಾರೆ.
ಸದ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವುದು ಲಿಂಗಾಯತರು, ನಂತರದ ಸ್ಥಾನದಲ್ಲಿ ಜೈನ ಸಮಾಜದವರು, ಕುರುಬ, ಪರಿಶಿಷ್ಟ, ಮರಾಠ ಹಾಗೂ ಮುಸ್ಲಿಂ ಹೀಗೆ ಜಾತಿವಾರು ಮತದಾರರ ಸಂಖ್ಯೆಯನ್ನು ಇಳಿಕೆ ಕ್ರಮದಲ್ಲಿ ಹೇಳಬಹುದು. ಜೈನ ಹಾಗೂ ಕುರುಬ ಸಮಾಜದವರ ಮತವನ್ನು ಯಾರು ಸೆಳೆಯುತ್ತಾರೆ ಎಂಬುದರ ಮೇಲೆ ಹೋರಾಟ ನಿರ್ಣಾಯಕವಾಗಲಿದೆ.
*
ಆಪರೇಷನ್ ಅದಲು– ಬದಲು
ಜೆಡಿಎಸ್‌ನಿಂದ ಎರಡು ಬಾರಿ ವಿಧಾನಸಭೆ ಹಾಗೂ ಒಂದು ಬಾರಿ ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಅವರು ಸೋಲುಂಡರು ಶ್ರೀಮಂತ ಪಾಟೀಲ. 2018ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಕರೆತಂದು ಟಿಕೆಟ್ ಕೊಟ್ಟರು. ಆಗ ಶ್ರೀಮಂತ ಮೊದಲ ಜಯ ಕಂಡರು.
ಆದರೆ, ಬಿಜೆಪಿ ನಡೆಸಿದ ‘ಆಪರೇಷನ್ ಕಮಲ’ದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಶ್ರೀಮಂತ ಕೂಡ ಬಿಜೆಪಿ ಸೇರಿದರು. ನಂತರ ಮುಖ್ಯಮಂತ್ರಿ ಆದ ಯಡಿಯೂರಪ್ಪ ಮುಂದೆ ನಿಂತು 2019ರಲ್ಲಿ ಮತ್ತೆ ಶ್ರೀಮಂತ ಅವರನ್ನು ಗೆಲ್ಲಿಸಿದರು. ಆಗ ಅಲ್ಲಸಂಖ್ಯಾತರ ಕಲ್ಯಾಣ ಸಚಿವ ಖಾತೆಯನ್ನೂ ನೀಡಿದರು.
ಶ್ರೀಮಂತ ಪಾಟೀಲ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದ ನಂತರ, ಬಿಜೆಪಿಯಲ್ಲಿದ್ದ ಭರಮಗೌಡ (ರಾಜು) ಕಾಗೆ ಅವರನ್ನು ಕಾಂಗ್ರೆಸ್ ಸೆಳೆಯಿತು. ಒಂದೇ ವರ್ಷದಲ್ಲಿ ಕಾಂಗ್ರೆಸ್– ಬಿಜೆಪಿ ಅಭ್ಯರ್ಥಿಗಳೇ ಅದಲು– ಬದಲಾಗಿದ್ದು ಗಮನಾರ್ಹ.
*
ಈವರೆಗೆ ಶಾಸಕರಾದವರು
ವರ್ಷ;ಶಾಸಕ;ಪಕ್ಷ
1962;ಎಸ್.ವಿ.ಪಾಟೀಲ;ಕಾಂಗ್ರೆಸ್
1967;ಚಂಪಾಬಾಯಿ ಬೋಗಲೆ;ಕಾಂಗ್ರೆಸ್
1972;ಆರ್.ಡಿ.ಕಿತ್ತೂರ;ಕಾಂಗ್ರೆಸ್
1978;ಎ.ಬಿ.ಜಕನೂರ;ಕಾಂಗ್ರೆಸ್
1983;ವಿ.ಎಲ್.ಪಾಟೀಲ;ಜೆ.ಎನ್.ಪಿ
1985;ವಿ.ಎಲ್.ಪಾಟೀಲ;ಜೆ.ಎನ್.ಪಿ
1989;ಎ.ಬಿ.ಜಕನೂರ;ಕಾಂಗ್ರೆಸ್
1994;ಮೋಹನ ಶಹಾ;ಜನತಾ ದಳ
1999;ಪರಸಗೌಡ ಅಪ್ಪಗೌಡ ಪಾಟೀಲ;ಕಾಂಗ್ರೆಸ್
2000;ಭರಮಗೌಡ (ರಾಜು) ಅಲಗೌಡ ಕಾಗೆ;ಜೆಡಿಯು
2004;ಭರಮಗೌಡ (ರಾಜು) ಅಲಗೌಡ ಕಾಗೆ;ಬಿಜೆಪಿ
2008;ಭರಮಗೌಡ (ರಾಜು) ಅಲಗೌಡ ಕಾಗೆ;ಬಿಜೆಪಿ
2013;ಭರಮಗೌಡ (ರಾಜು) ಅಲಗೌಡ ಕಾಗೆ;ಬಿಜೆಪಿ
2018;ಶ್ರೀಮಂತ ಪಾಟೀಲ;ಕಾಂಗ್ರೆಸ್
2019;ಶ್ರೀಮಂತ ಪಾಟೀಲ;ಬಿಜೆಪಿ
*******
2019ರ ಫಲಿತಾಂಶ
ಅಭ್ಯರ್ಥಿ;ಪಕ್ಷ;ಪಡೆದ ಮತ
ಶ್ರೀಮಂತ ಪಾಟೀಲ;ಬಿಜೆಪಿ;76,952
ಭರಮಗೌಡ (ರಾಜು) ಕಾಗೆ;ಕಾಂಗ್ರೆಸ್;58,395
ಶ್ರೀಶೈಲ ತುಗಶೆಟ್ಟಿ;ಪಕ್ಷೇತರ;2,442
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.