ADVERTISEMENT

ಬೆಳಗಾವಿಗಿಲ್ಲ ಪೂರ್ಣಕಾಲಿಕ DDPI: ಚಿಕ್ಕೋಡಿ ಉಪನಿರ್ದೇಶಕರಿಗೆ ಹೆಚ್ಚು ಜವಾಬ್ದಾರಿ

ಆಡಳಿತಾತ್ಮಕ, ಶೈಕ್ಷಣಿಕ ಚಟುವಟಿಕೆಗಳಿಗೆ ತೊಡಕು

ಇಮಾಮ್‌ಹುಸೇನ್‌ ಗೂಡುನವರ
Published 17 ಜನವರಿ 2024, 5:54 IST
Last Updated 17 ಜನವರಿ 2024, 5:54 IST
<div class="paragraphs"><p>ಬೆಳಗಾವಿಯ ಡಿಡಿಪಿಐ ಕಚೇರಿ ಹೊರನೋಟ </p></div>

ಬೆಳಗಾವಿಯ ಡಿಡಿಪಿಐ ಕಚೇರಿ ಹೊರನೋಟ

   

–ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಳಗಾವಿ ಉಪನಿರ್ದೇಶಕರ (ಡಿಡಿಪಿಐ) ಹುದ್ದೆ ಮೂರು ತಿಂಗಳಿಂದ ಖಾಲಿ ಇದ್ದು, ಆಡಳಿತಾತ್ಮಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

ADVERTISEMENT

ಬೆಳಗಾವಿಯು ಎರಡು ಶೈಕ್ಷಣಿಕ ಜಿಲ್ಲೆ ಒಳಗೊಂಡಿದೆ. ಚಿಕ್ಕೋಡಿ ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆ ಅವರಿಗೇ ಬೆಳಗಾವಿಯ ಪ್ರಭಾರ ಉಪನಿರ್ದೇಶಕರಾಗಿ ‘ಹೆಚ್ಚುವರಿ’ ಜವಾಬ್ದಾರಿ ವಹಿಸಲಾಗಿದೆ. ಆದರೆ, ಭೌಗೋಳಿಕವಾಗಿ ದೊಡ್ಡದಾಗಿರುವ ಜಿಲ್ಲೆಯಲ್ಲಿ 3,394 ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿವೆ. ಜಿಲ್ಲಾ ಕೇಂದ್ರದಿಂದ ಅಥಣಿ ತಾಲ್ಲೂಕಿನ ಕೆಲವು ಹಳ್ಳಿಗಳು 180 ಕಿ.ಮೀ. ದೂರದಲ್ಲಿವೆ. ಹಾಗಾಗಿ ಒಬ್ಬರೇ ಅಧಿಕಾರಿಗೆ ಎರಡೂ ಶೈಕ್ಷಣಿಕ ಜಿಲ್ಲೆಗಳ ಇಡೀ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕಷ್ಟವಾಗುತ್ತಿದೆ.

ವಿವಿಧ ಕೆಲಸಗಳ ಕಾರಣ ಶಿಕ್ಷಕರು ಮತ್ತು ಸಾರ್ವಜನಿಕರು ಬೆಳಗಾವಿ ಹಾಗೂ ಚಿಕ್ಕೋಡಿ ಡಿಡಿಪಿಐ ಕಚೇರಿಗಳಿಗೆ ಎಡತಾಕುತ್ತಿದ್ದಾರೆ. ಆದರೆ, ಏಕಕಾಲಕ್ಕೆ ಎರಡೂ ಕಡೆ ಲಭ್ಯವಾಗದ್ದರಿಂದ ವಾಪಸ್‌ ಹೋಗುತ್ತಿದ್ದಾರೆ.

ಅಕ್ಟೋಬರ್‌ನಿಂದ ಖಾಲಿ: ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿದ್ದ ಬಸವರಾಜ ನಾಲತವಾಡ 2023ರ ಅ.20ರಂದು ಲೋಕಾಯುಕ್ತ ಬಲೆಗೆ ಬಿದ್ದರು. ನಂತರ ಡಯಟ್‌ ಪ್ರಾಚಾರ್ಯ ಎಸ್‌.ಡಿ.ಗಾಂಜಿ, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಬಿ.ಎಸ್‌.ಮಾಯಾಚಾರಿ ಅವರನ್ನು ಪ್ರಭಾರ ಉಪನಿರ್ದೇಶಕರಾಗಿ ಸರ್ಕಾರ ನಿಯೋಜಿಸಿತ್ತು. ಡಿ.1ರಿಂದ ಮೋಹನಕುಮಾರ್‌ ಹಂಚಾಟೆ ಪ್ರಭಾರ ಉಪನಿರ್ದೇಶಕರಾಗಿ ಮುಂದುವರಿದಿದ್ದಾರೆ.

‘ಐದಾರು ತಿಂಗಳ ಹಿಂದೆ ಬೆಳಗಾವಿ ಡಿಡಿಪಿಐ ಹುದ್ದೆಗೆ ಇಬ್ಬರು ಅಧಿಕಾರಿಗಳ ಮಧ್ಯೆ ಪೈಪೋಟಿ ಕಂಡುಬಂದಿತ್ತು. ಈಗ ಮೂರು ತಿಂಗಳಿಂದ ಹುದ್ದೆ ಖಾಲಿ ಇದ್ದರೂ ಸರ್ಕಾರ ಭರ್ತಿಗೊಳಿಸುತ್ತಿಲ್ಲ. ಮಹತ್ವದ ಹುದ್ದೆಗೆ ಪೂರ್ಣಕಾಲಿಕ ಅಧಿಕಾರಿಯನ್ನೇಕೆ ನೇಮಿಸುತ್ತಿಲ್ಲ’ ಎಂದು ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.

ಪರೀಕ್ಷೆ ಸಿದ್ಧತೆಗೂ ತೊಡಕು: ಇನ್ನೇನು ಮಾರ್ಚ್‌, ಏಪ್ರಿಲ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿವೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 38 ಸಾವಿರ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 46 ಸಾವಿರ ಸೇರಿದಂತೆ ಜಿಲ್ಲೆಯಾದ್ಯಂತ 84 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಈ ಪರೀಕ್ಷೆಗೆ ಸಂಬಂಧಿಸಿ ನಿರಂತರವಾಗಿ ಅಧಿಕಾರಿಗಳು, ಮುಖ್ಯಶಿಕ್ಷಕರ ಸಭೆ ನಡೆಸಬೇಕು. ವಿಷಯ ಶಿಕ್ಷಕರಿಗೆ ಕಾರ್ಯಾಗಾರಗಳನ್ನು ಸಂಘಟಿಸಬೇಕು. ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಿ, ಶೈಕ್ಷಣಿಕ ಚಟುವಟಿಕೆ ಪರಿಶೀಲಿಸಬೇಕು. ಅಲ್ಲದೆ, ಸರ್ಕಾರ ರೂಪಿಸಿದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಆಡಳಿತಾತ್ಮಕ ಕೆಲಸಗಳನ್ನು ಸುಗಮವಾಗಿ ಮುಂದುವರಿಸಿಕೊಂಡು ಹೋಗಬೇಕು. ಈ ಮಧ್ಯೆ, ಜಿಲ್ಲಾಮಟ್ಟದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೂ ಹಾಜರಾಗಬೇಕು. ಆದರೆ, ಒಬ್ಬರೇ ಉಪನಿರ್ದೇಶಕರು ಎರಡೂ ಜವಾಬ್ದಾರಿ ನಿಭಾಯಿಸುತ್ತಿರುವುದರಿಂದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಇವೆಲ್ಲ ಕೆಲಸಕ್ಕೂ ತೊಡಕಾಗುತ್ತಿದೆ. ಸಕಾಲಕ್ಕೆ ಕೆಲಸಗಳಾಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.

ಸರ್ಕಾರ ನನಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳುತ್ತಿದ್ದೇವೆ.
-ಮೋಹನಕುಮಾರ್‌ ಹಂಚಾಟೆ ಡಿಡಿಪಿಐ ಚಿಕ್ಕೋಡಿ
ಬೆಳಗಾವಿ ಡಿಡಿಪಿಐ ಹುದ್ದೆ ಭರ್ತಿಗೊಳಿಸುವ ಸಂಬಂಧ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯೊಂದಿಗೆ ಮಾತನಾಡುತ್ತೇನೆ.
-ರಾಹುಲ್‌ ಶಿಂಧೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.