ADVERTISEMENT

ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಸಿದ್ದರಾಮಯ್ಯ ಅವರೇ ಸಿಎಂ: ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 7:44 IST
Last Updated 10 ಸೆಪ್ಟೆಂಬರ್ 2024, 7:44 IST
ಆರ್‌.ವಿ. ದೇಶಪಾಂಡೆ
ಆರ್‌.ವಿ. ದೇಶಪಾಂಡೆ   

ಬೆಳಗಾವಿ: ‘ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ನಾನು ಸಿ.ಎಂ ಸ್ಥಾನದ ಆಕಾಂಕ್ಷಿಯಲ್ಲ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಇನ್ನೂ ನಾಲ್ಕು ವರ್ಷ ಅಧಿಕಾರ ನಡೆಸಬೇಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಸಿ.ಎಂ‌ ಬದಲಾವಣೆ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ಸಿದ್ದರಾಮಯ್ಯ ಬದಲಾವಣೆ ವಿಚಾರ ನನಗೆ ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಬದಲಿಸುತ್ತಾರೆ ಎಂದು ಯಾರು ಹೇಳಿದ್ದಾರೆ’ ಎಂದು ಪ್ರಶ್ನಿಸಿದರು.

‘ಸಿ.ಎಂ ಕುರ್ಚಿ ಖಾಲಿ ಇದ್ದಾಗ, ಆ ಸ್ಥಾನಕ್ಕೆ ಕ್ಲೇಮ್ ಮಾಡಬೇಕು. ಈಗ ಆ ಸ್ಥಾನವೇ ಖಾಲಿ ಇಲ್ಲ. ಅನೇಕರು ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ನಾನು ಈಗ ಸಿ.ಎಂ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸಚಿವ ಸತೀಶ ಜಾರಕೊಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ದೀಪಾವಳಿ ಬಳಿಕ ರಾಜ್ಯದಲ್ಲಿ ಸಿ.ಎಂ ಬದಲಾವಣೆ ಆಗುತ್ತಾರೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ದೇಶಪಾಂಡೆ, ‘ದೀಪಾವಳಿ ನಂತರ ಕಾಂಗ್ರೆಸ್‌ ಸರ್ಕಾರ ಅಸ್ಥಿರಗೊಳಿಸಬೇಕು ಎಂದು ಆ ಪಕ್ಷದವರು ಪ್ರಯತ್ನಿಸುತ್ತಿದ್ದಾರೆ. ಆದರೆ, ಹಲವು ಸಮಸ್ಯೆಗಳಿದ್ದರೂ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹57 ಸಾವಿರ ಕೋಟಿ ಅನುದಾನ ವ್ಯಯಿಸಿದ್ದೇವೆ. ಬಿಜೆಪಿಯವರು ಅದನ್ನು ಅರ್ಥೈಸಿಕೊಳ್ಳಬೇಕು’ ಎಂದರು.

‘ನಾನೂ ಸ್ವತಃ ವಕೀಲನಿದ್ದೇನೆ. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಸಿ.ಎಂ, ಅವರ ಪತ್ನಿ ತಪ್ಪು ಹೆಜ್ಜೆ ಇರಿಸಿಲ್ಲ. ನಮ್ಮ ಪರವಾಗಿಯೇ ನ್ಯಾಯಾಲಯ ಆದೇಶ ನೀಡಲಿದೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ನಲ್ಲಿ ನಾಯಕರು ಒಳಗೊಳಗೆ ಕತ್ತಿ‌ ಮಸಿಯುತ್ತಿದ್ದಾರೆ’ ಎಂಬ ಸಂಸದ ಜಗದೀಶ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಶೆಟ್ಟರ್ ಏಕೆ ಹೀಗೆ ಹೇಳಿದ್ದಾರೆ ಗೊತ್ತಿಲ್ಲ. ಅವರು ಈ ರೀತಿ ಮಾತನಾಡುವವರಲ್ಲ’ ಎಂದರು.

ಶಿವಕುಮಾರ ಹಾಗೂ ಪ್ರಧಾನಿ ನರೇಂದ್ರ ಭೇಟಿಯಾದ ಕುರಿತು ಪ್ರತಿಕ್ರಿಯಿಸಿದ ದೇಶಪಾಂಡೆ, ‘ಸಿದ್ದರಾಮಯ್ಯ ಅವರೂ ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಮೋದಿ ಭೇಟಿಯಾಗಿದ್ದಾರೆ. ರಾಜ್ಯಕ್ಕೆ ಅನುದಾನ ನೀಡುವ ಕುರಿತಾಗಿ ಮಾತನಾಡಿ ಬಂದಿದ್ದಾರೆ. ದೆಹಲಿ ನಮ್ಮ ದೇಶದ ಕೇಂದ್ರಸ್ಥಾನ. ಹಾಗಾಗಿ ಅಲ್ಲಿಗೆ ಆಗಾಗ ನಮ್ಮ ಪಕ್ಷದ ನಾಯಕರೂ ಹೋಗುತ್ತಾರೆ’ ಎಂದು ಪ್ರತಿಕ್ರಿಯಿಸಿದರು.‌

‘ಕಮಲಾ ಹ್ಯಾರಿಸ್ ಆಹ್ವಾನದ ಮೇರೆಗೆ ಡಿ.ಕೆ.ಶಿವಕುಮಾರ ಅಮೆರಿಕಕ್ಕೆ ಹೋಗಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗ್ಯಾರಂಟಿ ಯೋಜನೆ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ದೇಶಪಾಂಡೆ, ‘ಅರ್ಹರಲ್ಲದವರು ಯೋಜನೆ ಫಲಾನುಭವಿಯಾಗುತ್ತಾರೆ. ಅದನ್ನು ತಡೆಯುವುದಕ್ಕಾಗಿ ಪರಿಷ್ಕರಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಬಿಪಿಎಲ್ ಪಡಿತರ ಚೀಟಿ ಸಿಗಬೇಕು. ಆದರೆ, ರಾಜ್ಯದಲ್ಲಿ ಶೇ 80ರಷ್ಟು ಜನರು ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿದ್ದಾರೆ. ಸುಳ್ಳು ಮಾಹಿತಿ ಕೊಟ್ಟು ಪಡೆದ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಿದ್ದೇವೆ. ಇದಕ್ಕಾಗಿ ಸಮಿತಿ ರಚಿಸಿ, ತನಿಖೆ ಮಾಡುತ್ತಿದ್ದೇವೆ. ನಿಯಮಾನುಸಾರ ಪಡೆಯದವರು ತಮ್ಮ ಚೀಟಿಯನ್ನು ಸ್ವಯಂಪ್ರೇರಿತವಾಗಿ ವಾಪಸ್ ಕೊಡಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.