ಬೆಳಗಾವಿ: ಉಮೇಶ ಕತ್ತಿ ಅವರ ಮೃತದೇಹವನ್ನು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಅವರ ಹುಟ್ಟೂರಾದ, ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಗೆ ತೆಗೆದುಕೊಂಡು ಹೋಗಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲಂಕೃತ ಸೇನಾ ವಾಹನದಲ್ಲಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲು ತಯಾರಿ ನಡೆದಿದೆ.
ಮೈನಸ್ 4 (–4) ಸೆಂಟಿಗ್ರೇಡ್ ಉಷ್ಣಾಂಶದ ಪೆಟ್ಟಿಗೆಯನ್ನು ಈ ಸೇನಾ ವಾಹನದಲ್ಲಿ ಈಗಾಗಲೇ ಇಡಲಾಗಿದೆ. ಮೂರು ಕ್ವಿಂಟಲ್ ಹೂವುಗಳಿಂದ ವಾಹನವನ್ನು ಅಲಂಕಾರ ಮಾಡಲಾಗಿದೆ.
ಸಂಚರಿಸುವ ಮಾರ್ಗ:
ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಡುವ ವಾಹನವು ಬೆಳಗಾವಿ ನಗರ, ಕಾಕತಿ, ಯಮಕನಮರಡಿ, ಹುಕ್ಕೇರಿ ಮೂಲಕ ಬೆಲ್ಲದ ಬಾಗೇವಾಡಿಗೆ ತಲುಪಲಿದೆ. ಬೆಲ್ಲದ ಬಾಗೇವಾಡಿಯ ಅವರ ಸ್ವಂತ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಮಾರ್ಗಮಧ್ಯದ ಊರಿಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಸ್ವಯಂ ಪ್ರೇರಿತ ಬಂದ್ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಗುಂಟ ಇರುವ ಎಲ್ಲ ಅಂಗಡಿ, ಮುಂಗಟ್ಟು ಹಾಗೂ ಹೋಟೆಲ್, ದಾಬಾಗಳನ್ನು ಸ್ವಯಂ ಪ್ರೇರಣೆಯಿಂದ ಮುಚ್ಚಲಾಗಿದೆ.
ಅವರು ಪ್ರತಿನಿಧಿಸಿದ ಹುಕ್ಕೇರಿ ಪಟ್ಟಣ, ಹುಟ್ಟಿದ ಊರು ಬೆಲ್ಲದ ಬಾಗೇವಾಡಿಯಲ್ಲಿ ನೀರವ ಮೌನ ಆವರಿಸಿದೆ. ವ್ಯಾಪಾರ– ವಹಿವಾಟು ಸ್ಥಗಿತಗೊಳಿಸಿ, ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದರು.
ಇದಕ್ಕೂ ಮುನ್ನ ಸಂಕೇಶ್ವರದ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಾರ್ವಜನಿಕರು ದರ್ಶನಕ್ಕೆ ಇಡಲಾಗುವುದು. ಸಂಜೆ 6ರ ನಂತರ ಅಲ್ಲಿಂದ ಮೆರವಣಿಗೆ ಅಂತಿಮ ಯಾತ್ರೆ ನಡೆಯಲಿದೆ ಎಂದು ಕತ್ತಿ ಅವರ ಕುಟುಂಬದ ಆಪ್ತರು ತಿಳಿಸಿದ್ದಾರೆ.
ತಂಡೋಪ ತಂಡವಾಗಿ ಬಂದ ಜನ
ಬೆಳಗಾವಿ ನಗರದ ಶಿವಬಸವ ನಗರದ ಅವರ ಮನೆ, ಬೆಲ್ಲದ ಬಾಗೇವಾಡಿಯ ಮನೆಯಲ್ಲೂ ಅಪಾರ ಸಂಖ್ಯೆಯ ಜನ ಸೇರಿದ್ದಾರೆ. ಸಚಿವರು ಇನ್ನಿಲ್ಲ ಎಂಬ ಸುದ್ದಿ ತಡರಾತ್ರಿ ಕಾಳ್ಗಿಚ್ಚಿನಂತೆ ಹಬ್ಬಿತು. ಜನ ತಂಡೋಪ ತಂಡವಾಗಿ ಅವರ ಮನೆಗಳ ಮುಂದೆ ಸೇರಿದರು. ಹಿರಿಯ ರಾಜಕಾರಣಿಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಗಳ ಪೀಠಾಧಿಪತಿಗಳು ಸಹ ಬೆಲ್ಲದ ಬಾಗೇವಾಡಿಗೆ ಧಾವಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.