ಬೆಳಗಾವಿ: 'ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ ಮತ್ತು ಮುಂಬರುವ ಚುನಾವಣೆಗಳನ್ನು ಎಲ್ಲರೂ ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆಂಬ ಸಂದೇಶವನ್ನು ವಿಧಾನಪರಿಷತ್‌ನ ಈ ಚುನಾವಣೆ ಮೂಲಕ ನೀಡಿದ್ದೇವೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, ಪರಿಷತ್ ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಇತ್ತು. ಅದೇ ರೀತಿಯಾಗಿ ನಡೆದಿದೆ. ಎರಡನೇ ಪ್ರಾಶಸ್ತ್ಯದ ಮತಗಳಿಂದ ಯಾರೇ ಗೆದ್ದಿದ್ದರೂ ನಮಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂದರು.
ಕಾಂಗ್ರೆಸ್ ಸೋಲಿಸಲೇಬೇಕು ಎಂದು ಎದುರಾಳಿಗಳು ಪಣ ತೊಟ್ಟಿದ್ದರು, ಇನ್ನೊಂದೆಡೆ ಪಕ್ಷದ ಹಾಲಿ, ಮಾಜಿ ಶಾಸಕರು, ಮುಖಂಡರು ಕೈ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ಹಟ ತೊಟ್ಟಿದ್ದರು. ಒಗ್ಗಟ್ಟಿಗೆ ಜಯ ದೊರೆತಿದೆ. ಪಕ್ಷದ ನಾಯಕರು ಹಾಗೂ ಮುಖಂಡರ ಕಾರ್ಯಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಹೇಳಿದರು.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೊಂದಾಣಿಕೆ ರಾಜಕಾರಣ ಮಾಡುವವರು ಎಂದು ಟೀಕಿಸಿದರು.
ನಮ್ಮ ಅಭ್ಯರ್ಥಿ ಚನ್ನರಾಜ ಗೆಲುವಿಗೆ ಬೇಕಾದಷ್ಟು ಮತಗಳು ಪಕ್ಷದ ಬಳಿ ಇವೆ. ಹೀಗಾಗಿ ಕಾಂಗ್ರೆಸ್ ಗೆಲುವು ನಿಶ್ಚಿತವೆಂದು ಹೇಳಿದ್ದೆವು. ಅದೇ ರೀತಿ ಗೆಲುವು ಪಡೆದಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸೋಲಿಸಲು ಖಂಡಿತ ಸಾಧ್ಯವಿಲ್ಲ ಎನ್ನುವುದು ಈ ಚುನಾವಣೆ ಮೂಲಕ ಸಾಬೀತಾಗಿದೆ. ಪರಿಷತ್ ಚುನಾವಣೆಯಿಂದ ಜಿಲ್ಲೆಯಲ್ಲಿ ಭಿನ್ನ ವಾತಾವರಣ ನಿರ್ಮಾಣವಾಗಿದೆ, ಏರಿಳಿತ ಸಾಮಾನ್ಯ. ಎಲ್ಲವನ್ನೂ ಸ್ವೀಕರಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.