ADVERTISEMENT

ಗೋಕಾಕ | ಪ್ರವಾಹ ಭೀತಿ: ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 16:00 IST
Last Updated 25 ಜುಲೈ 2024, 16:00 IST
ಗೋಕಾಕ ಹೊರವಲಯದಲ್ಲಿ ಘಟಪ್ರಭಾ ನದಿಗೆ ನಿರ್ಮಿಸಿರುವ ಅಂತರ್ ರಾಜ್ಯ ಹೆದ್ದಾರಿ ಜತ್ತ-ಜಾಂಬೋಟಿಯ ಭಾಗವಾಗಿರುವ ಲೋಳಸೂರ ಸೇತುವೆ
ಗೋಕಾಕ ಹೊರವಲಯದಲ್ಲಿ ಘಟಪ್ರಭಾ ನದಿಗೆ ನಿರ್ಮಿಸಿರುವ ಅಂತರ್ ರಾಜ್ಯ ಹೆದ್ದಾರಿ ಜತ್ತ-ಜಾಂಬೋಟಿಯ ಭಾಗವಾಗಿರುವ ಲೋಳಸೂರ ಸೇತುವೆ   

ಗೋಕಾಕ: ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ, ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದು, ಪ್ರವಾಹ ಭೀತಿ ಉಂಟಾಗಿದೆ.

ಹಿಡಕಲ್ ಜಲಾಶಯದಿಂದ 15 ಸಾವಿರ ಕ್ಯುಸೆಕ್ ಮತ್ತು ಶಿರೂರು ಜಲಾಯಶದಿಂದ ಹೆಚ್ಚುವರಿಯಾಗಿ 7 ಸಾವಿರ ಕ್ಯುಸೆಕ್ ನೀರನ್ನು ನದಿಗಳಿಗೆ ಹರಿ ಬಿಟ್ಟಿರುವ ಪರಿಣಾಮ ಗೋಕಾಕ ನಗರ ಮತ್ತು ತಾಲ್ಲೂಕಿನಲ್ಲಿ ಪ್ರವಾಹ ಉಂಟಾಗುವ ಭೀತಿ ಅಧಿಕವಾಗಿದ್ದು, ಗುರುವಾರ ಮಧ್ಯಾಹ್ನದಿಂದ ಭಾನುವಾರದ ತನಕ ತಾಲ್ಲೂಕಿನ ಎಲ್ಲ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರಜೆ ಘೋಷಿಸಿದ್ದಾರೆ.

ನಗರದ ಹಳೆದನಗಳ ಪೇಟೆ, ಕುಂಬಾರ ಓಣಿ, ಉಪ್ಪಾರ ಓಣಿ, ಭೋಜಗಾರ ಓಣಿ ಸೇರಿದಂತೆ ಸಂಭವನೀಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಪಿಐ ಗೋಪಾಲ ರಾಠೋಡ, ಪೌರಾಯುಕ್ತ ರಮೇಶ ಜಾಧವ, ಎಇಇ ಪಾಟೀಲ, ಶಹರ ಠಾಣೆ ಎಸ್.ಐ. ಕೆ.ವಾಲಿಕರ ಭೇಟಿ ನೀಡಿ ನದಿ ತಟದಲ್ಲಿರುವ ವರ್ತಕರಿಗೆ, ಸಾರ್ವಜನಿಕರಿಗೆ ದನ-ಕರುಗಳನ್ನು ತಗೆದುಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದ್ದಾರೆ.

ADVERTISEMENT

ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಚಿಕ್ಕೋಳಿ ಸೇತುವೆ ಮತ್ತು ಲೋಳಸೂರ ಸೇತುವೆಗಳು ಸಧ್ಯಕ್ಕೆ ಮುಳುಗಡೆಯಾಗಿಲ್ಲ. ಆದರೆ, ಮಳೆ ಪ್ರಮಾಣ ಹೀಗೆಯೇ ಮುಂದುವರಿದರೆ ಚಿಕ್ಕೋಳಿ ಸೇತುವೆ ಮುಳುಗಡೆಯಾಗುವ ಸಂಭವವಿದ್ದು, ಸಾರ್ವಜನಿಕರು ನದಿ ತೀರದತ್ತ ಹೋಗ ಕೂಡದು ಎಂದು ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆ ನೀಡಿದೆ.

ಗೋಕಾಕ ಹೊರವಲಯದಲ್ಲಿ ಮಾರ್ಕಂಡೇಯ ನದಿಗೆ ನಿರ್ಮಿಸಿರುವ ಚಿಕ್ಕೋಳಿ ಸೇತುವೆ ಮೂಲಕ ಗೋಕಾಕ ಫಾಲ್ಸ್ ಕಡೆಗೆ ಸಾಗುವ ಸೇತುವೆ
ಗೋಕಾಕ ನಗರದ ಹಳೆಯ ದನಗಳ ಪೇಟೆಗೆ ಘಟಪ್ರಭೆಯ ಪ್ರವಾಹದ ನೀರು ನುಗ್ಗುತ್ತಿರುವ ಹಿನ್ನೆಲೆ ಅಲ್ಲಿ ಸಂಚಾರವನ್ನು ನಿರ್ಬಂಧಿಸಿ ಪೊಲೀಸರು ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಭೇಟಿ ನೀಡಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದರು
ಗೋಕಾಕ ಸಮೀಪದ ಗೋಕಾಕ ಜಲಪಾತ ಗುರುವಾರ ಸಂಜೆ ಮೈದುಂಬಿ 187 ಅಡಿ ಆಳಕ್ಕೆ ಧುಮ್ಮಿಕ್ಕಿ ನೋಡುಗರ ಮೈ-ಮನ ಸೆಳೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.