ADVERTISEMENT

ಅಥಣಿ: 22 ಗ್ರಾಮಗಳಿಗೆ ಪ್ರವಾಹ ಭೀತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:30 IST
Last Updated 25 ಜುಲೈ 2024, 14:30 IST
ಅಥಣಿ ಸಮೀಪದ ಸಪ್ರಸಾಗರ ಗ್ರಾಮದಿಂದ ಜನರನ್ನ ತಾಲ್ಲೂಕು ಪಂಚಾಯಿತಿ ಇಒ ಶಿವಾನಂದ ಕಲ್ಲಾಪುರ ನೇತೃತ್ವದಲ್ಲಿ ಸ್ಥಳಾಂತರಿಸಲಾಯಿತು
ಅಥಣಿ ಸಮೀಪದ ಸಪ್ರಸಾಗರ ಗ್ರಾಮದಿಂದ ಜನರನ್ನ ತಾಲ್ಲೂಕು ಪಂಚಾಯಿತಿ ಇಒ ಶಿವಾನಂದ ಕಲ್ಲಾಪುರ ನೇತೃತ್ವದಲ್ಲಿ ಸ್ಥಳಾಂತರಿಸಲಾಯಿತು   

ಅಥಣಿ: ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ತಾಲ್ಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ಅಧಿಕಾರಿಗಳು ಪೂರ್ವ ಸಿದ್ಧತೆ ನಡೆಸಿದ್ದಾರೆ.

ಹುಲಗಬಾಳಿ ಗ್ರಾಮದ ಮಾಂಗ ವಸತಿಯ ಸುಮಾರು 40 ಕುಟುಂಬಗಳ 120ಕ್ಕೂ ಜನರನ್ನ ಹಾಗೂ ಜಾನುವಾರುಗಳನ್ನು ಗುರುವಾರ ಸ್ಥಳಾಂತರಿಸಲಾಯಿತು. ಶಾಶ್ವತ ನೆಲೆ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದ ಈ ಜನರನ್ನು ಅಧಿಕಾರಿಗಳು ಮನವೊಲಿಸಿ ಹುಲಗಬಾಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರಕ್ಕೆ ಕರೆತಂದರು.

ಸಪ್ತಸಾಗರ ಗ್ರಾಮದ ಬನದ ತೋಟದ ಸುಮಾರು 35 ಕುಟುಂಬಗಳನ್ನೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ತಿಳಿಸಿದ್ದಾರೆ.

ADVERTISEMENT

ಸಭೆ: ನದಿ ಪಾತ್ರದ ಸುಮಾರು 22 ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ತಾಲ್ಲೂಕು ಆಡಳಿತದಿಂದ ಕಟ್ಟೆಚ್ಚರ ವಹಿಸಲು ತಹಶೀಲ್ದಾರ್‌ ಯು.ವಾಣಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಜರುಗಿತು. ಗ್ರಾಮಸ್ಥರಿಗೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಬೇಕು. ಮೊದಲ ಹಂತದಲ್ಲಿ ಮುಳುಗಡೆಯಾಗುವ ಗ್ರಾಮಗಳನ್ನು ಗುರುತಿಸಿ ಅವರಿಗೆ ಸೂಚನೆ ನೀಡಬೇಕು. ಅಲ್ಲಿನ ಜನರನ್ನು ಸ್ಥಳಾಂತರಿಸಲು ಸಕಲ ಸಿದ್ಧತೆ ಹಾಕಿಕೊಳ್ಳುವಂತೆ ಸೂಚನೆ ನೀಡಿದರು.

ಈಗಾಗಲೇ 7 ಬೋಟ್‌ಗಳ ವ್ಯವಸ್ಥೆ ಇದ್ದು, ಅಗತ್ಯ ಬಿದ್ದರೆ ತಿಳಿಸಲಾಗುವುದು. ಸ್ಥಳಗಳನ್ನು ಗುರುತಿಸಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸುವುದು. ಅಗತ್ಯವಿದ್ದರೆ ಶೆಡ್ಡುಗಳನ್ನು ನಿರ್ಮಿಸಿ ಕಾಳಜಿ ಕೇಂದ್ರಗಳನ್ನು ನಿರ್ಮಿಸುವಂತೆ ಲೋಕ ಉಪಯೋಗ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸುರಕ್ಷಿತ ಸ್ಥಳಕ್ಕೆ ತೆರಳಿ: ಸವದಿ

ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ತಾಲ್ಲೂಕಿನ ಸುಮಾರು 24 ಹಳ್ಳಿಗಳಿಗೆ ಪ್ರವಾಹ ಎದುರಾಗಲಿದೆ. ನದಿ ಈಗಾಗಲೇ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಪ್ರವಾಹ ತಲೆದೋರಬಹುದು. ನದಿ ಪಾತ್ರದ ಜನರು ನದಿ ನೀರಿನಲ್ಲಿ ಹೋಗುವ ಸಾಹಸ ಮಾಡಬಾರದು ಎಂದು ಶಾಸಕ ಲಕ್ಷ್ಮಣ ಸವದಿ ಮನವಿ ಮಾಡಿದ್ದರೆ.

ರೈತರು ತಮ್ಮ ಜಾನುವಾರುಗಳನ್ನು ಕೂಡ ನದಿಗಳಲ್ಲಿ ಬಿಡಬಾರದು. ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳು ಕೈಕೊಳ್ಳುವ ಎಲ್ಲಾ ಸಲಹೆಗಳಿಗೆ ಸ್ಪಂದಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಹೊಂದಬೇಕು ಎಂದು ಮನವಿ ಮಾಡಿದ್ದಾರೆ.

ಸಪ್ತಸಾಗರ ಗ್ರಾಮದಲ್ಲಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.