ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ಮಳೆ ಅಬ್ಬರ ತಗ್ಗಿದೆ. ಆದರೆ, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಇದೆ. ಹೀಗಾಗಿ ಕೃಷ್ಣಾ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಯಥಾಸ್ಥಿತಿಯಿದೆ. 44 ಸೇತುವೆಗಳು ಮುಳುಗಿವೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 2.45 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ದೂಧಗಂಗಾ ನದಿಯಿಂದ 48,570 ಕ್ಯುಸೆಕ್ ಸೇರಿ 2.93 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್‌ನಲ್ಲಿ ಹರಿಯುತ್ತಿದೆ. ನವೀಲುತೀರ್ಥ ಅಣೆಕಟ್ಟೆಯಿಂದ 5 ಸಾವಿರ ಕ್ಯುಸೆಕ್ ನೀರು ನಿರಂತರವಾಗಿ ಮಲಪ್ರಭಾ ನದಿಗೆ ಹರಿಯುತ್ತಿದೆ. ರಾಮದುರ್ಗ ಸಮೀಪದ ಹಳೆ ಸೇತುವೆ ಮುಳುಗಡೆಯಾಗಿದೆ.
ಮೂಡಲಗಿ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ. ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಚಾವಣಿಯವರೆಗೆ ಇದ್ದ ನೀರು ತುಸು ಕಡಿಮೆಯಾಗಿದೆ. ಮಠಾಧೀಶರು ಹಾಗೂ ಅವರ ಶಿಷ್ಯರು ಮೇಲಂತಸ್ತಿನ ಎತ್ತರದ ಕೊಠಡಿಯಲ್ಲಿ ಆಶ್ರಯ ಪಡೆದಿದ್ದಾರೆ.
ಮುಧೋಳ ವರದಿ (ಬಾಗಲಕೋಟೆ ಜಿಲ್ಲೆ) :
ತಾಲ್ಲೂಕಿನಲ್ಲಿ ಮಳೆ ಇಲ್ಲದಿದ್ದರೂ ಘಟಪ್ರಭಾ ನದಿ ಪ್ರವಾಹ ಗ್ರಾಮಗಳಿಗೆ ವ್ಯಾಪಿಸಿದೆ. ವಿಜಯಪುರ ಬೆಳಗಾವಿ ರಾಜ್ಯ ಹೆದ್ದಾರಿ–34ರ ಚಿಂಚಖಂಡಿ ಸಮೀದ ಸೇತುವೆ ಮುಳುಗಡೆಯಾಗಿದೆ.
ತಾಲ್ಲೂಕಿನ ಮಿರ್ಜಿ ಗ್ರಾಮವು ಜಲಾವೃತವಾಗಿದ್ದು, ಅಲ್ಲಿನ 138 ಜನರನ್ನು ಸ್ಥಳಾಂತರಿಸಲಾಗಿದೆ.ಆದರೆ, ಅಲ್ಲಿನ ಕಾಳಜಿ ಕೇಂದ್ರಕ್ಕೂ ನೀರು ಬಂದ ಕಾರಣ ಅದನ್ನು ಸಾಲಿಮಡ್ಡಿ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ.
ತಾಲ್ಲೂಕಿ ಮಳಲಿ ಗ್ರಾಮಕ್ಕೂ ನೀರು ನುಗ್ಗಿದೆ. ಆದರೆ, ಅಲ್ಲಿನ ಕಾಳಜಿ ಕೇಂದ್ರಕ್ಕೆ ಜನರು ಹೋಗಿಲ್ಲ. ಒಂಟಗೋಡಿ ಗ್ರಾಮದ ಸುತ್ತ ನೀರು ಆವರಿಸಿದ್ದು, ಇದರಿಂದ ಜನರನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಿದ್ದಾರೆ.
ಸಂಚಾರ ನಿಷೇಧ (ಮಡಿಕೇರಿ ವರದಿ):
ಮಡಿಕೇರಿ– ಕುಟ್ಟ ರಾಜ್ಯ ಹೆದ್ದಾರಿಯ ಮಂಚಳ್ಳಿ ಗ್ರಾಮದ ಬಳಿ ಸೋಮವಾರ ರಸ್ತೆ ಕುಸಿದಿದೆ. ಅದರಿಂದ ಸಂಚಾರವನ್ನು ಒಂದು ತಿಂಗಳ ಕಾಲ (ಆಗಸ್ಟ್ 27ರವರೆಗೆ) ಸಂಪೂರ್ಣ ನಿಷೇಧಿಸಲಾಗಿದೆ. ಈ ರಸ್ತೆಯ ಬದಲಾಗಿ ಕುಟ್ಟ– ಕಾನೂರು ಭಾಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.
ಪೊನ್ನಂಪೇಟೆಯ ತೆರಾಲು ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು 6 ಹಸುಗಳು ಮೃತಪಟ್ಟಿವೆ.
ದುರ್ಘಟನೆ ಸ್ಥಳದಲ್ಲಿ ಮೌನ (ಕಾರವಾರ ವರದಿ):
ಶಿರೂರಿನಲ್ಲಿ ಗುಡ್ಡ ಕುಸಿತ ಸ್ಥಳದಲ್ಲಿ ಸತತ 13 ದಿನಗಳಿಂದ ಕೇಳಿಬರುತ್ತಿದ್ದ ಜೆಸಿಬಿ ಸದ್ದು, ರಕ್ಷಣಾ ಪಡೆಗಳ ಕಾರ್ಯಾಚರಣೆಯ ಗದ್ದಲ ಸೋಮವಾರ ದೂರವಾಗಿದ್ದವು. ಸ್ಥಳದಲ್ಲಿ ಬೆರಳೆಣಿಕೆ ಪೊಲೀಸ್ ಸಿಬ್ಬಂದಿ ಮಾತ್ರ ಇದ್ದರು.
ಗಂಗಾವಳಿ ನದಿಯಲ್ಲಿ ಸಿಲುಕಿದ ಲಾರಿ, ಕಾಣೆಯಾದ ಮೂವರ ಶೋಧ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ, ನೌಕಾದಳ ಮತ್ತು ಈಶ್ವರ ಮಲ್ಪೆ ನೇತೃತ್ವದ ತಂಡದ ಮುಳುಗು ತಜ್ಞರು ಸ್ಥಳದಿಂದ ಈಗಾಗಲೇ ತೆರಳಿದ್ದಾರೆ. ನದಿಯಲ್ಲಿ ದೋಣಿಗಳ ಮೂಲಕ ಕಣ್ಮರೆಯಾದವರ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಯಾವ ಕಾರ್ಯಾಚರಣೆಯೂ ನಡೆಯಲಿಲ್ಲ.
‘ನದಿಯಲ್ಲಿ ಲಾರಿ ಬಿದ್ದಿದೆ ಎನ್ನಲಾದ ಸ್ಥಳದಲ್ಲಿ ಇರುವ ಮಣ್ಣಿನ ರಾಶಿ ತೆರವಿಗೆ ಕೇರಳದ ತ್ರಿಶ್ಶೂರಿನಿಂದ ತಂತ್ರಜ್ಞರ ತಂಡ ಮಂಗಳವಾರ ಭೇಟಿ ನೀಡಲಿದೆ. ತಂಡವು ಬ್ರಿಡ್ಜ್ ಮೌಂಟೆಡ್ ಡ್ರೆಡ್ಜಿಂಗ್ (ನದಿಯಲ್ಲಿ ಹೂಳೆತ್ತುವ ಬಾರ್ಜ್) ತರುವ ಬಗ್ಗೆ ಪರಿಶೀಲಿಸುವುದು. ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ನೆರೆ ಪೀಡಿತ ಪ್ರದೇಶಗಳಿಗೆ ಇಂದಿನಿಂದ ಬಿಜೆಪಿ ನಾಯಕರ ಭೇಟಿ
ಬೆಂಗಳೂರು: ರಾಜ್ಯದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಬಗ್ಗೆ ಅಧ್ಯಯನ ನಡೆಸಲು ಬಿಜೆಪಿ ಮುಂದಾಗಿದೆ.
ಇದಕ್ಕಾಗಿ ಆರು ತಂಡಗಳನ್ನು ರಚಿಸಲಾಗಿದೆ. ಮಂಗಳವಾರದಿಂದ ಗುರುವಾರದವರೆಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿ ಸಂಗ್ರಹಿಸಲಿರುವ ಮಾಹಿತಿಯನ್ನು ವರದಿ ರೂಪದಲ್ಲಿ ಅಧ್ಯಕ್ಷರಿಗೆ ಸಲ್ಲಿಸಲಿದ್ದಾರೆ. ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯದ ಬಗ್ಗೆ ಅವಲೋಕನ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ವಿರೋಧಪಕ್ಷದ ನಾಯಕ ಆರ್.ಅಶೋಕ ನೇತೃತ್ವದ ತಂಡ ಮಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ, ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ತಂಡವು ಶಿವಮೊಗ್ಗ ಜಿಲ್ಲೆ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದ ತಂಡವು ಕೊಡಗು ಮತ್ತು ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಲಿದೆ.
ವಿಧಾನಪರಿಷತ್ ವಿರೋಧಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದ ತಂಡವು ರಾಯಚೂರು, ಯಾದಗಿರಿ ಜಿಲ್ಲೆಗಳು, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ನೇತೃತ್ವದ ತಂಡವು ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ, ಮಾಜಿ ಸಚಿವ ಬಿ.ಶ್ರೀರಾಮುಲು ನೇತೃತ್ವದ ತಂಡವು ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.