ADVERTISEMENT

ಚಿಕ್ಕೋಡಿ | ನಿರಂತರ ಸುರಿಯುತ್ತಿರುವ ಮಳೆ: ಪ್ರವಾಹ ಸಾಧ್ಯತೆ

ಡಾ.ಚಂದ್ರಶೇಖರ ಎಸ್.
Published 5 ಜುಲೈ 2024, 4:40 IST
Last Updated 5 ಜುಲೈ 2024, 4:40 IST
<div class="paragraphs"><p>ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವ ಬೋಟ್‌ಗಳು</p></div>

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವ ಬೋಟ್‌ಗಳು

   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳಲ್ಲಿ ದಿನದಿಂದ ದಿನಕ್ಕೆ ನೀರು ಹರಿಯುವ ಪ್ರಮಾಣ ಹೆಚ್ಚಳವಾಗುತ್ತಿದೆ.

ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ-ಯಡೂರು ಬ್ಯಾರೇಜ್ ಬಳಿಯಲ್ಲಿ ಬುಧವಾರ 26 ಸಾವಿರ ಕ್ಯುಸೆಕ್ ನಷ್ಟಿದ್ದ ನೀರು ಒಂದೇ ದಿನದಲ್ಲಿ 47 ಸಾವಿರ ಕ್ಯುಸೆಕ್  ಏರಿಕೆ ಕಂಡಿದೆ.  ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಿವೆ. ಹೀಗಾಗಿ ಜಿಲ್ಲಾಡಳಿತ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

ADVERTISEMENT

ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ 2 ಲಕ್ಷ ಕ್ಯುಸೆಕ್ ಗೂ ಹೆಚ್ಚು ನೀರು ಹರಿದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು, ಈಗಾಗಲೇ ಜಿಲ್ಲಾಡಳಿತ ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಿದೆ. ಅಥಣಿ ತಾಲ್ಲೂಕಿನ 21 ಪೂರ್ಣ, 3 ಭಾಗಶಃ, ಕಾಗವಾಡ ತಾಲ್ಲೂಕಿನಲ್ಲಿ 8 ಪೂರ್ಣ, 5 ಭಾಗಶಃ, ಚಿಕ್ಕೋಡಿ ತಾಲ್ಲೂಕಿನಲ್ಲಿ 5 ಪೂರ್ಣ, 6 ಭಾಗಶಃ, ರಾಯಬಾಗ ತಾಲ್ಲೂಕಿನಲ್ಲಿ 8 ಪೂರ್ಣ, 7 ಭಾಗಶಃ ತೊಂದರೆಗೊಳಗಾಗುವ ಗ್ರಾಮಗಳಾಗಿವೆ. ಇನ್ನು, ನಿಪ್ಪಾಣಿ ತಾಲ್ಲೂಕಿನಲ್ಲಿ ದೂಧಗಂಗಾ ಮತ್ತು ವೇದಗಂಗಾ ನದಿಯಲ್ಲಿ 50 ಸಾವಿರ ಕ್ಯುಸೆಕ್ ಗಿಂತ ಹೆಚ್ಚು ನೀರು ಹರಿದರೆ 13 ಹಾಗೂ 1 ಲಕ್ಷ ಕ್ಯುಸೆಕ್ ಗಿಂತ ಹೆಚ್ಚು ನೀರು ಹರಿದರೆ 10 ಗ್ರಾಮಗಳು ಬಾಧಿತವಾಗಲಿವೆ.

ಚಿಕ್ಕೋಡಿ ಉಪ ವಿಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಜನ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಈಗಾಗಲೇ 135 ಕಾಳಜಿ ಕೇಂದ್ರ ಹಾಗೂ 135 ಗೋಶಾಲೆಗಳನ್ನು ಗುರುತಿಸಲಾಗಿದೆ. ಅಥಣಿ ತಾಲ್ಲೂಕಿನಲ್ಲಿ 22 ಕಾಳಜಿ ಕೇಂದ್ರ, 22
ಗೋಶಾಲೆ, ಚಿಕ್ಕೋಡಿ ತಾಲ್ಲೂಕಿನಲ್ಲಿ 45 ಕಾಳಜಿ ಕೇಂದ್ರ, 45 ಗೋಶಾಲೆ, ರಾಯಬಾಗ ತಾಲ್ಲೂಕಿನಲ್ಲಿ 40 ಕಾಳಜಿ ಕೇಂದ್ರ, 40 ಗೋಶಾಲೆ, ಕಾಗವಾಡ ತಾಲ್ಲೂಕಿನಲ್ಲಿ 17 ಕಾಳಜಿ ಕೇಂದ್ರ ಹಾಗೂ 17 ಗೋಶಾಲೆಗಳನ್ನು ಗುರುತಿಸಲಾಗಿದೆ.

ಪ್ರವಾಹ ಪರಿಸ್ಥಿತಿ ಸಾಧ್ಯತೆ ಇರುವ ಗ್ರಾಮಗಳಿಂದ ಹಾಗೂ ತೋಟದ ವಸತಿ ಪ್ರದೇಶಗಳಿಂದ ಸುರಕ್ಷಿತ ಸ್ಥಳಕ್ಕೆ ಜನ ಜಾನುವಾರು ಸಾಗಾಟ ಮಾಡಲು 16 ಸರ್ಕಾರಿ ಹಾಗೂ 10 ಖಾಸಗಿ ಬೋಟ್ ಗಳನ್ನು
ಹೊಂದಲಾಗಿದೆ.

16 ಬೋಟ್ ಗಳ ಪೈಕಿ 3 ಬೋಟ್ ಗಳನ್ನು ರಿಪೇರಿ ಮಾಡಬೇಕಿದೆ. ಅಥಣಿ ತಾಲ್ಲೂಕಿನಲ್ಲಿ 6 ಸರ್ಕಾರಿ,
ಕಾಗವಾಡ ತಾಲ್ಲೂಕಿನಲ್ಲಿ 2 ಸರ್ಕಾರಿ, 5 ಖಾಸಗಿ, ಚಿಕ್ಕೋಡಿ ತಾಲ್ಲೂಕಿನಲ್ಲಿ 6 ಸರ್ಕಾರಿ, 4 ಖಾಸಗಿ,
ರಾಯಬಾಗ ತಾಲ್ಲೂಕಿನಲ್ಲಿ 2 ಸರ್ಕಾರಿ ಹಾಗೂ 1 ಖಾಸಗಿ ಬೋಟ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗುತ್ತಿದೆ.

ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಉಪ ವಿಭಾಗದ ನದಿ ತೀರದ ಗ್ರಾಮಗಳಲ್ಲಿ ಈಗಾಗಲೇ 73 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ 11, ಕಾಗವಾಡದಲ್ಲಿ 10, ಅಥಣಿಯಲ್ಲಿ 23, ರಾಯಬಾಗದಲ್ಲಿ 12 ಹಾಗೂ ನಿಪ್ಪಾಣಿಯಲ್ಲಿ 17 ಜನ ನೋಡಲ್ ಅಧಿಕಾರಿಗಳನ್ನು ನೇಮಕಮಾಡಲಾಗಿದೆ.

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕುಡಚಿ-ಉಗಾರ, ಅಂಕಲಿ-ಮಾಂಜರಿ, ಕಲ್ಲೋಳ-ಯಡೂರ ಸೇತುವೆಗಳು ಇದ್ದು, ಕಲ್ಲೋಳ ಯಡೂರ ಹಳೆಯ ಸೇತುವೆಗೆ ಹಲವು ವರ್ಷಗಳ ಹಿಂದೆಯೇ ಹಾನಿಯಾಗಿದ್ದರಿಂದ ಆಗಲೇ ಸಂಚಾರ ಸ್ಥಗಿತಗೊಂಡಿದೆ. ದೂಧಗಂಗಾ ನದಿಗೆ ಅಡ್ಡಲಾಗಿ ಚಿಕ್ಕೋಡಿ ತಾಲ್ಲೂಕಿನಲ್ಲಿ ಮಲಿಕವಾಡ-ದಾನವಾಡ, ಸದಲಗಾ-ಬೋರಗಾಂವ, ನಿಪ್ಪಾಣಿ ತಾಲ್ಲೂಕಿನಲ್ಲಿ ಕಾರದಗಾ-ಬೋಜ, ಬಾರವಾಡ-ಕುನ್ನೂರು ಕಿರಿದಾದ ಸೇತುವೆಗಳು ಇವೆ. ವೇದಗಂಗಾ ನದಿಗೆ ಅಡ್ಡಲಾಗಿ ನಿಪ್ಪಾಣಿ ತಾಲ್ಲೂಕಿನಲ್ಲಿ ಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ ಕಿರು ಸೇತುವೆಗಳು ಇವೆ. ಪ್ರವಾಹದಿಂದ
ಜಲಾವೃತಗೊಂಡಲ್ಲಿ ಸುತ್ತು ಬಳಸಿಕೊಂಡು ಸಂಚರಿಸಲು ಪರ್ಯಾಯ ಮಾರ್ಗಗಳು ಇವೆ.

ಪ್ರವಾಹ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ತರಲು ಈಗಾಗಲೇ ಎನ್ ಡಿ ಆರ್ ಎಫ್ ತಂಡ ಸದಲಗಾ ಪಟ್ಟಣದಲ್ಲಿ ಬೀಡು ಬಿಟ್ಟಿದೆ. 36 ಜನರ ತಂಡ ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ. ಅಗ್ನಿಶಾಮಕದಳ, ಸ್ಥಳೀಯ ಪೊಲೀಸ್ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ. ಮಳೆಯು ಮುಂದುವರೆದಲ್ಲಿ ಆಯಕಟ್ಟಿನ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದ್ದು, ಸಧ್ಯ ಯಾವುದೇ ಆತಂಕ ಪಡುವ ಪರಿಸ್ಥಿತಿ ಇಲ್ಲ
–ಸುಭಾಷ ಸಂಪಗಾವಿ, ಉಪ ವಿಬಾಗಾಧಿಕಾರಿ, ಚಿಕ್ಕೋಡಿ
ದೂಧಗಂಗಾ ನದಿಗೆ ಅಡ್ಡಲಾಗಿರುವ ಬಾರವಾಡ-ಕುನ್ನೂರ ಕಿರು ಸೇತುವೆ ಜಲಾವೃತಗೊಂಡಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ನದಿ ತೀರದ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳಬೇಕಾಗುತ್ತದೆ.
–ರಮೇಶ ಪಾಟೀಲ, ಭೋಜ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.