ADVERTISEMENT

ಶಿವಸೇನಾ ತಗಾದೆ: ಕೊಲ್ಹಾಪುರಕ್ಕೆ ಬಸ್‌ ಸಂಚಾರ ನಿಲುಗಡೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 9:14 IST
Last Updated 13 ಮಾರ್ಚ್ 2021, 9:14 IST
   

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿಯುವ ಕೃತ್ಯ ಆರಂಭಿಸಿರುವುದರಿಂದ ಇಲ್ಲಿಂದ ಅಲ್ಲಿಗೆ ಎನ್‌ಡಬ್ಲ್ಯುಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆಯನ್ನು ಶನಿವಾರ ಬೆಳಿಗ್ಗೆಯಿಂದ ಸ್ಥಗಿತಗೊಳಿಸಲಾಗಿದೆ. ಅಲ್ಲಿಂದಲೂ ಇಲ್ಲಿಗೆ ಬಸ್‌ಗಳು ಬರುತ್ತಿಲ್ಲ.

ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಅಂಗಡಿಗಳು, ಮಳಿಗೆಗಳಲ್ಲಿದ್ದ ಕನ್ನಡದ ನಾಮಫಲಕಗಳಿಗೆ ಮಸಿ ಬಳಿದಿದ್ದರು. ಇದಕ್ಕೆ ಪ್ರತೀಕಾರ ಎನ್ನುವಂತೆ, ಕನ್ನಡಪರ ಹೋರಾಟಗಾರರು ನಗರದ ಹೊರವಲಯದಲ್ಲಿ ಮರಾಠಿ ಫಲಕಗಳಿಗೆ ಮಸಿ ಬಳಿದಿದ್ದರು. ಕೆಲವೆಡೆ ಹರಿದು ಹಾಕಿದ್ದರು. ಶಿವಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಶಿರೋಳಕರ ಕಾರ್‌ನ ಮುಂಭಾಗದಲ್ಲಿ ಅಳವಡಿಸಿದ್ದ ಮರಾಠಿಯಲ್ಲಿದ್ದ ನಂಬರ್‌ ಪ್ಲೇಟ್ ಅನ್ನು ಕಿತ್ತು ಹಾಕಿದ್ದರು. ಶಿವಸೇನಾ ಹಾಗೂ ಕರವೇ ಮುಖಂಡರ ನಡುವೆ ವಾಗ್ವಾದ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಕೊಲ್ಹಾಪುರ ಬಸ್ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ರಾಜ್ಯದ ಬಸ್‌ಗಳ ಮುಂದಿನ ಗಾಜುಗಳಿಗೆ, ಪೊಲೀಸರ ಸಮ್ಮುಖದಲ್ಲೇ ಮಸಿ ಬಳಿದಿದ್ದಾರೆ. ಈ ಗಲಾಟೆಗಳ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

‘ಇಲ್ಲಿಂದ ಕೊಲ್ಹಾಪುರಕ್ಕೆ ಹೋಗುವ ಬಸ್‌ಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆ ಬಸ್‌ಗಳು ನಿಪ್ಪಾಣಿ ಬಳಿಯ ಚೆಕ್‌ ಪೋಸ್ಟ್‌ಗಳವರೆಗೆ ಹೋಗಿ ವಾಪಸಾಗುತ್ತವೆ. ಮಹಾರಾಷ್ಟ್ರದ ಸಾಂಗ್ಲಿ, ಮೀರಜ್ ಮೊದಲಾದ ಪ್ರದೇಶಗಳಿಗೆ ಬಸ್‌ಗಳ ಕಾರ್ಯಾಚರಣೆ ಎಂದಿನಂತಿದೆ. ಮುಂದಿನ ಸೂಚನೆ ಬರುವವರೆಗೆ, ಮುಂಜಾಗ್ರತಾ ಕ್ರಮವಾಗಿ ಕೊಲ್ಹಾಪುರಕ್ಕೆ ಬಸ್ ಕಾರ್ಯಾಚರಣೆ ಇರುವುದಿಲ್ಲ. ನಿತ್ಯ ಇಲ್ಲಿಂದ ಅಲ್ಲಿಗೆ 97 ಹಾಗೂ ಅಲ್ಲಿಂದ ಇಲ್ಲಿಗೆ 57 ಬಸ್‌ಗಳು ಸಂಚರಿಸುತ್ತಿದ್ದವು’ ಎಂದು ಎನ್‌ಡಬ್ಲ್ಯುಕೆಆರ್‌ಟಿಸಿ ಎಂ.ಆರ್. ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ದಿನಗಳಿಂದ ಮಹಾರಾಷ್ಟ್ರದ ಕೊಲ್ಹಾಪುರ ಹಾಗೂ ಸುತ್ತಮುತ್ತ ಶಿವಸೇನಾದವರು ಕನ್ನಡಿಗರಿಗೆ ಕಿರುಕುಳ ನೀಡುತ್ತಿರುವುದು ತುಂಬಾ ಖಂಡನೀಯ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ಹೇಳಿದ್ದಾರೆ.

‘ಕನ್ನಡಿಗರು ಹೆಚ್ಚಿರುವ ಕೊಲ್ಹಾಪುರದಲ್ಲಿ ನಾಮಫಲಕಗಳಲ್ಲಿ ಕನ್ನಡ ಬಳಸುವುದು ಅಪರಾಧವಲ್ಲ. ಇದನ್ನೇ ದೊಡ್ಡದು ಮಾಡಿ ಅಲ್ಲಿನ ಕನ್ನಡಿಗರಿಗೆ ಹಾಗೂ ಅವರು ನಡೆಸುತ್ತಿರುವ ವಾಣಿಜ್ಯ ಸಂಸ್ಥೆಗಳಿಗೆ ತೊಂದರೆ ಕೊಡುತ್ತಿರುವುದು ಮತ್ತು ನಮ್ಮ ಸರ್ಕಾರದ ಸಾರಿಗೆ ಬಸ್‌ಗಳಿಗೆ ಹಾನಿ ಮಾಡುತ್ತಿರುವುದು ಖಂಡನೀಯ. ಆ ಕಾರ್ಯಕರ್ತರ ಮೇಲೆ ಮಹಾರಾಷ್ಟ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಕನ್ನಡಿಗರು ಹಾಗೂ ಮರಾಠಿ ಭಾಷಿಗರ ನಡುವೆ ಸೌಹಾರ್ದ ವಾತಾವರಣ ಉಂಟು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

‘ರಾಜ್ಯದ ಗೃಹ ಸಚಿವರು ಆ ರಾಜ್ಯದ ಗೃಹ ಮಂತ್ರಿ ಸಂಪರ್ಕಿಸಿ ಕ್ರಮಕ್ಕೆ ಆಗ್ರಹಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.